ನವದೆಹಲಿ, ಜ 27 (DaijiworldNews/AA): ಯುಪಿಎಸ್ ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಐಎಎಸ್ ಅಧಿಕಾರಿಯಾಗುವ ಉದ್ದೇಶದಿಂದ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಕೆಲವರು ಮಾತ್ರ ತಮ್ಮ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಫಲರಾಗುತ್ತಾರೆ. ಅಂತಹವರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2ನೇ ರ್ಯಾಂಕ್ ಪಡೆದ ಐಎಎಸ್ ಅಧಿಕಾರಿ ರುಕ್ಮಣಿ ರೈರ್ ಕೂಡ ಒಬ್ಬರು.
ರುಕ್ಮಣಿ ರೈರ್ ಅವರು ಬಾಲ್ಯದಲ್ಲಿ ಶೈಕ್ಷಣಿಕವಾಗಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಅವರು 6ನೇ ತರಗತಿಯಲ್ಲಿ ಓದುತ್ತಿದ್ದಾಗ ಅನುತ್ತೀರ್ಣರಾಗಿದ್ದರು. ಗುರುದಾಸ್ ಪುರದಲ್ಲಿ ತನ್ನ ಶಿಕ್ಷಣವನ್ನು ಅವರು ಪೂರ್ಣಗೊಳಿಸುತ್ತಾರೆ. ಅವರು ಡಾಲ್ ಹೌಸಿಯ ಹೀರಿ ಶಾಲೆಗೆ 4 ನೇ ತರಗತಿಗೆ ಸೇರಿಕೊಳ್ಳುತ್ತಾರೆ. ಬಳಿಕ ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪದವಿ ಶಿಕ್ಷಣ ಮುಗಿಸುತ್ತಾರೆ. ನಂತರ ಅವರು ಸಮಾಜ ವಿಜ್ಞಾನ ವಿಷಯದಲ್ಲಿ ಮುಂಬೈನ ಟಾಟಾ ಇನ್ ಸ್ಟಿಟ್ಯೂಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.
ರುಕ್ಮಣಿ ಅವರು ತಮ್ಮ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಮೈಸೂರಿನ ಅಶೋಕಾ ಮತ್ತು ಮುಂಬೈನ ಅನ್ನಪೂರ್ಣ ಮಹಿಳಾ ಮಂಡಲದಂತಹ ಎನ್ ಜಿಒ ಗಳಲ್ಲಿ ಇಂಟರ್ನ್ ಶಿಪ್ ಮಾಡುತ್ತಾರೆ. ರುಕ್ಮಣಿ ಅವರು ಎನ್ ಜಿಒಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ನಾಗರಿಕ ಸೇವೆಯಲ್ಲಿ ಆಸಕ್ತಿ ಹೊಂದುತ್ತಾರೆ. ಇದು ರುಕ್ಮಣಿ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯಲು ಕಾರಣವಾಗುತ್ತದೆ.
2011ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದ ರುಕ್ಮಣಿ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಜೊತೆಗೆ 2 ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ. ರುಕ್ಮಣಿ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯಲು ಯಾವುದೇ ತರಬೇತಿ ಪಡೆಯದೆ ಸ್ವಯಂ ಅಧ್ಯಯನದ ಮೂಲಕವೇ ಪರೀಕ್ಷೆ ಬರೆಯುತ್ತಾರೆ. ರುಕ್ಮಣಿ ಅವರು 6 ನೇ ತರಗತಿಯಿಂದ 12 ನೇ ತರಗತಿಯವರೆಗೆ ಎನ್ ಸಿಇಆರ್ ಪುಸ್ತಕಗಳನ್ನು ಓದುತ್ತಿರುತ್ತಾರೆ. ಜೊತೆಗೆ ನಿತ್ಯವೂ ನಿಯತಕಾಲಿಕೆಗಳನ್ನು, ಸುದ್ದಿಪತ್ರಿಕೆಗಳನ್ನು ಓದುತ್ತಿದ್ದರು.
6ನೇ ತರಗತಿಯಲ್ಲಿ ಅನುತ್ತೀರ್ಣರಾದ ರುಕ್ಮಣಿ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೆಂದರೆ ಸುಲಭದ ಮಾತಾಗಿರಲಿಲ್ಲ. ಅವರು ಸಾಕಷ್ಟು ಸವಾಲುಗಳನ್ನು ಎದುರಿಸುವ ಮೂಲಕ ಯುಪಿಎಸ್ ಸಿಯಲ್ಲಿ ಉತ್ತೀರ್ಣರಾಗುತ್ತಾರೆ. ಈ ಮೂಲಕ ರುಕ್ಮಣಿ ಅವರು ಹಲವಾರು ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ.