ಚಾಮರಾಜನಗರ,ಜ 26 (DaijiworldNews/ AK): ನಿಗಮ ಮಂಡಳಿ ನೇಮಕ ಮಾಡುವಾಗ ಎಲ್ಲರನ್ನು ಕೇಳಿ ಮಾಡಲು ಆಗುತ್ತಾ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ನಿಗಮ ಮಂಡಳಿ ನೇಮಕ ವಿಚಾರವಾಗಿ ನನ್ನನ್ನು ಯಾರು ವಿಚಾರಿಸಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ವೆಂಕಟೇಶ್, ನಾವು ಕೋಳಿ ಕೊಯ್ಯುವಾಗ ಕೇಳಲು ಆಗುತ್ತಾ ಎಂದು ನಗು ನಗುತ್ತಲೇ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಅಯೋದ್ಯೆಯಲ್ಲಿ ರಾಮಲಲ್ಲ ಪ್ರತಿಷ್ಠಾಪನೆಯು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೆಂಕಟೇಶ್, ನಾವು ರಾಜಕಾರಣಿಗಳು. ಪ್ರತಿ ಸಾವಿಗು ಹೋಗುತ್ತೇವೆ ಮದುವೆಗೂ ಹೋಗುತ್ತೇವೆ. ಅಷ್ಟೇ ಯಾಕೆ ಗುಡ್ಲು ಕೂರಿಸಿದಕ್ಕೂ ಹೋಗುತ್ತೇವೆ, ನಾಮಕರಣಕ್ಕೂ ಹೋಗುತ್ತೇವೆ. ಇವೆಲ್ಲಾ ವರ್ಕೌಟ್ ಆಗುತ್ತಾ? ಇದೆಲ್ಲ ವರ್ಕೌಟ್ ಆಗಲ್ಲ ಎಂದರು.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿರುವ ವಿಚಾರವಾಗಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಸಚಿವರು. ಹಾಗಾಗಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಕೇಳಿದರು.