ಮಂಡ್ಯ, ಎ24(Daijiworld News/SS): ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದುಬಂದಿತ್ತು. ಇದೀಗ ಹುತಾತ್ಮರಾದ ಯೋಧ ಗುರು ಕುಟುಂಬದಲ್ಲಿ ಹಣಕ್ಕಾಗಿ ನಡೆಯುತ್ತಿದ್ದ ಅತ್ತೆ-ಸೊಸೆಯರ ಜಗಳ ಮತ್ತೆ ಹೆಚ್ಚಾಗಿದೆ.
ಈ ಹಿಂದೆಯೂ ಕುಟುಂಬದಲ್ಲಿ ಹಲವಾರು ಬಾರಿ ಜಗಳ ನಡೆದು, ಅತ್ತೆ ಚಿಕ್ಕೋಳಮ್ಮ ಹಾಗೂ ಗುರು ಪತ್ನಿ ಕಲಾವತಿ ನಡುವೆ ಇದ್ದ ಮನಸ್ತಾಪ ಹೆಚ್ಚಾಗಿತ್ತು. ಇದೀಗ ಮತ್ತೆ ಇಬ್ಬರೂ ಪರಸ್ಪರ ನಿಂದಿಸಿಕೊಂಡಿದ್ದಾರೆ. ಈಗಾಗಲೇ ಹಲವು ಬಾರಿ ಗ್ರಾಮದ ಹಿರಿಯರು ಇಬ್ಬರ ನಡುವಿನ ಮನಸ್ತಾಪ ನಿವಾರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು.
ಹುತಾತ್ಮರಾದ ಯೋಧ ಗುರು ಕುಟುಂಬಕ್ಕೆ ಪರಿಹಾರ ರೂಪದಲ್ಲಿ ಬಂದ ಚೆಕ್ಗಳು ಕಲಾವತಿ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯವಾದರೆ, ನಗದು ರೂಪದಲ್ಲಿ ಬಂದ ಪರಿಹಾರದ ಹಣ ಗುರು ತಾಯಿ ಚಿಕ್ಕೋಳಮ್ಮ ಅವರಿಗೆ ಬಂದಿದೆ ಎನ್ನಲಾಗಿದೆ. ಹೀಗಾಗಿ ಹೊಗೆಯಾಡುತ್ತಿದ್ದ ದ್ವೇಷ ಹೆಚ್ಚಾಗಿ ಗಲಾಟೆ ನಡೆದಿದೆ. ಗಲಾಟೆ ನಿಲ್ಲಿಸಲು ಗುರು ಸಹೋದರ ಮಧು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಆಗಮಿಸಿದ ಕಲಾವತಿ ಪೋಷಕರು ಮಗಳನ್ನು ಕರೆದೊಯ್ದಿದ್ದಾರೆ.
ವಿದೇಶಿ ಉದ್ಯಮಿಯೊಬ್ಬರು 1 ಕೋಟಿ ರೂ., ರಾಜ್ಯ ಸರ್ಕಾರ 25 ಲಕ್ಷ, ಅಂಬಾನಿ ಕಂಪನಿಯಿಂದ 25 ಲಕ್ಷ, ಇನ್ಪೋಸಿಸ್ ಫೌಂಡೇಷನ್ನಿಂದ 10 ಲಕ್ಷ, ಸಚಿವ ಜಮೀರ್ ಅಹಮದ್ ಖಾನ್ 10 ಲಕ್ಷ, ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ ರೂ. ಸೇರಿ ವಿವಿಧ ಪಕ್ಷಗಳ ಮುಖಂಡರು, ಸಂಸ್ಥೆಗಳವರು ಹಣ ನೀಡಿದ್ದರು. ಮಾತ್ರವಲ್ಲ, ನಟ ದಿ.ಅಂಬರೀಷ್ ಪತ್ನಿ ಸುಮಲತಾ 20 ಗುಂಟೆ ಜಮೀನನ್ನು ಕೊಡುಗೆಯಾಗಿ ನೀಡಿದ್ದರು. ಆದರೆ, ಈ ಹಣವೇ ಈಗ ಕುಟುಂಬ ಸದಸ್ಯರ ಗಲಾಟೆಗೆ ಕಾರಣವಾಗಿದೆ.
ಇಡೀ ದೇಶವೇ ಯೋಧರ ಸಾವಿಗೆ ಮರುಗಿತ್ತು. ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಗುರುವಿನ ಅಂತ್ಯಸಂಸ್ಕಾರ ನಡೆಸಿತ್ತು. ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವು ಗಣ್ಯರು ಗುಡಿಗೆರೆಗೆ ಆಗಮಿಸಿ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.