ಬೆಂಗಳೂರು, ಜ 25 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬಯಸಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ, ಊಹಾಪೋಹಗಳನ್ನು ಬಿಡಿ, ಮೋದಿ ಏನು ಹೇಳುತ್ತಾರೋ ಗೊತ್ತಿಲ್ಲ. ಒಂದು ವೇಳೆ ಅವರು ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಹೇಳಿದರೆ ಎಲ್ಲಿಂದಾದರೂ ಸ್ಪರ್ಧಿಸಬಹುದು ಎಮ್ದರು.
ಇನ್ನು ಕುಮಾರಸ್ವಾಮಿ ಅವರು ದೆಹಲಿಗೆ ಬರಬೇಕೇ ಎನ್ನುವುದನ್ನು ಮೋದಿ ಮತ್ತು ಶಾ ನಿರ್ಧರಿಸಬೇಕು. ಆದರೆ, ನನ್ನ ಜ್ಞಾನದ ಪ್ರಕಾರ, ಅಂತಹ ಯಾವುದೇ ಚರ್ಚೆಗಳು ಇಲ್ಲಿಯವರೆಗೆ ನಡೆದಿಲ್ಲ. ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ ಅಷ್ಟೆ ಎಂದು ತಿಳಿಸಿದ್ದಾರೆ.