ಮಲಪ್ಪುರಂ, ಜ 25 (DaijiworldNews/AA): ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ 150 ವರ್ಷ ಜೈಲು ಶಿಕ್ಷೆ, 4 ಲಕ್ಷ ರೂಪಾಯಿ ದಂಡ ವಿಧಿಸಿ ಕೇರಳ ನ್ಯಾಯಾಲಯ ಆದೇಶ ಹೊರಡಿಸಿದೆ.
ಆರೋಪಿಯ ವಿರುದ್ಧ ದಾಖಲಾಗಿರುವಂತದ ಪೋಕ್ಸೊ ಕಾಯ್ದೆ, ಐಪಿಸಿ ಹಾಗೂ ಬಾಲನ್ಯಾಯ ಕಾಯ್ದೆಯಡಿ ಸೇರಿ ಒಟ್ಟು 150 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಲಪ್ಪುರಂನ ಪೆರಿಂದಲ್ ಮಣ್ಣ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶೆ ಸಿನಿ ಎಸ್.ಆರ್ ಅವರು ಆದೇಶಿಸಿದ್ದಾರೆ.
ಆರೋಪಿ ವಿರುದ್ಧ ದಾಖಲಾಗಿದ್ದ ಒಂದು ಕಾಯ್ದೆಯಡಿ 40 ವರ್ಷ ಜೈಲು ಶಿಕ್ಷೆ, ಐಪಿಸಿ ಸೆಕ್ಷನ್ 376(3) ರ ಅಡಿ 30 ವರ್ಷ ಹಾಗೂ ಪೋಕ್ಸೊ ಕಾಯ್ದೆಯಡಿ 30 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಪೋಕ್ಸೊ ಕಾಯ್ದೆಯ ಸೆಕ್ಷನ್ 5(ಐ) ಹಾಗೂ 5(ಎನ್)ರ ಅಡಿ ತಲಾ 40 ವರ್ಷ, ಐಪಿಸಿ ಕಾಯ್ದೆಯ ಸೆಕ್ಷನ್ 450ರ ಅಡಿ 7 ವರ್ಷ ಹಾಗೂ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75ರ ಅಡಿ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಆರೋಪಿಗೆ 150 ವರ್ಷಗಳ ಕಾಲ ಶಿಕ್ಷೆ ವಿಧಿಸುವುದರೊಂದಿಗೆ 4 ಲಕ್ಷ ರೂಪಾಯಿ ದಂಡವನ್ನು ಕೂಡ ವಿಧಿಸಲಾಗಿದೆ. ಇದರಲ್ಲಿ 2 ಲಕ್ಷವನ್ನು ಸಂತ್ರಸ್ತೆಗೆ ಪರಿಹಾರವಾಗಿ ಕೊಡಬೇಕು ಎಂದು ಹೇಳಲಾಗಿದೆ. ಇನ್ನು ಈ ಅತ್ಯಾಚಾರವು 2022 ರಲ್ಲಿ ನಡೆದಿದ್ದು, ಆರೋಪಿಯು ತನ್ನ ಮೂವರು ಪತ್ನಿಯರ ಪೈಕಿ ಓರ್ವ ಪತ್ನಿಯ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.