ಬೆಂಗಳೂರು, ಜ 25 (DaijiworldNews/HR): ನಟ ದರ್ಶನ್ ಅವರಿಗೆ ಆಪ್ತರಾಗಿರುವ ರೂಪದರ್ಶಿ, ನಟಿ ಪವಿತ್ರಾ ಗೌಡ ಅವರು ತಾವು ದರ್ಶನ್ ಅವರೊಂದಿಗಿನ ಹಲವು ಪೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ನಮ್ಮ ಸಂಬಂಧಕ್ಕೆ ಹತ್ತು ವರ್ಷ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪವಿತ್ರಾ ಗೌಡ ಅವರ ವಿರುದ್ದ ಗರಂ ಆಗಿದ್ದಾರೆ.
ಪವಿತ್ರಾ ಗೌಡ, ಮಾಡೆಲ್ ಮತ್ತು ನಟಿಯಾಗಿದ್ದು, ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವಿತ್ರಾ ಗೌಡ ಅವರು ದರ್ಶನ್ ಜೊತೆಗಿನ ಚಿತ್ರಗಳನ್ನು ಹೆಚ್ಚಾಗಿ ಅಪ್ಲೋಡ್ ಮಾಡುತ್ತಿರಲಿಲ್ಲ. ಹಿಂದೊಮ್ಮೆ ದರ್ಶನ್ರ ತಾಯಿ ಹಾಗೂ ಸಹೋದರಿ ಜೊತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದರು.
ಇನ್ನು ಕಳೆದ ವರ್ಷ ದರ್ಶನ್ರ ಹುಟ್ಟುಹಬ್ಬಕ್ಕೆ ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದ ಚಿತ್ರದಲ್ಲಿ ದರ್ಶನ್ ಜೊತೆಗೆ ಪವಿತ್ರಾ ಗೌಡ ಇದ್ದರು. ಆಗ ಮೊದಲ ಬಾರಿಗೆ ಇದರ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ್ದ ದರ್ಶನ್ರ ಪತ್ನಿ ವಿಜಯಲಕ್ಷ್ಮಿ, ಮೇಘಾ ಶೆಟ್ಟಿ ವಿರುದ್ದನೂ ಗರಂ ಆಗಿದ್ದರು. ಕೂಡಲೇ ಮೇಘಾ ಶೆಟ್ಟಿ, ತಾವು ಹಂಚಿಕೊಂಡಿದ್ದ ಚಿತ್ರಗಳನ್ನು ಡಿಲೀಟ್ ಮಾಡಿದ್ದರು.
ಪವಿತ್ರಾ ಗೌಡಗೆ ಈಗಾಗಲೇ ವಿವಾಹವಾಗಿ ಖುಷಿ ಗೌಡ ಹೆಸರಿನ ಮಗಳಿದ್ದಾರೆ. ನಾಲ್ಕು ತಿಂಗಳ ಹಿಂದಷ್ಟೆ ತಮ್ಮ ಪುತ್ರಿ ಜೊತೆಗೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.
ಇನ್ನು ಪವಿತ್ರಾ ಗೌಡ ಪತಿ ಹೆಸರು ಸಂಜಯ್ ಸಿಂಗ್ ಎಂದಾಗಿದ್ದು, ಪವಿತ್ರಾ ಹಾಗೂ ಸಂಜಯ್ ಹಲವು ವರ್ಷಗಳಿಂದ ಪರಸ್ಪರ ದೂರವೇ ಇದ್ದಾರೆ. ಪವಿತ್ರಾ ಗೌಡ ಹಾಗೂ ಅವರ ಪತಿಯ ಹಳೆಯ ಚಿತ್ರಗಳನ್ನು ವಿಜಯಲಕ್ಷ್ಮಿ ದರ್ಶನ್, ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.