ಬೆಂಗಳೂರು, ಎ24(Daijiworld News/SS): ಶ್ರೀಲಂಕಾದ ಕೊಲಂಬೊದಲ್ಲಿ ಭೀಕರ ಉಗ್ರರ ದಾಳಿಗೆ ಬಲಿಯಾದ ಕನ್ನಡಿಗರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಈ ಪೈಕಿ 8 ಜನ ಜೆಡಿಎಸ್ ಕಾರ್ಯಕರ್ತರಾಗಿದ್ದಾರೆ. ಗುರುತು ಪತ್ತೆಯಾಗಿರುವ 8 ಜನರ ಪೈಕಿ ಬಿಟಿಎಂ ಲೇಔಟ್ ನಿವಾಸಿ ನಾಗರಾಜ ರೆಡ್ಡಿ ಅವರ ಮೃತದೇಹವನ್ನು ಈಗಾಗಲೇ ಬೆಂಗಳೂರಿಗೆ ತರಲಾಗಿದೆ. ಶ್ರೀಲಂಕಾ ಏರ್ಲೈನ್ ವಿಮಾನದಲ್ಲಿ ಶವವನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ಶವವನ್ನು ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಇಬ್ಬರ ಗುರುತು ಪತ್ತೆಯಾಗಿಲ್ಲ.
ಮಾಹಿತಿ ಇಲಾಖೆಯ ಪ್ರಕಾರ, ಕರ್ನಾಟಕ ಮೂಲದ ನಾರಾಯಣ ಚಂದ್ರಶೇಖರ್ ಮತ್ತು ರೇಮುರಾಯ್ ತುಳಸಿ ರಾಮ್ ಎಂಬುವರು ಕೂಡ ಲಂಕಾದಲ್ಲಿ ಮೃತಪಟ್ಟಿದ್ದಾರೆ. ಅವರ ಗುರುತುಗಳು ಪತ್ತೆಯಾಗಿಲ್ಲ.
ಸರಣಿ ದಾಳಿಗಳ ಬಗ್ಗೆ ಗುಪ್ತಚರ ಇಲಾಖೆಯ ಮುನ್ಸೂಚನೆ ಹೊರತಾಗಿಯೂ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲು ವಿಫಲವಾದ ಕಾರಣಕ್ಕಾಗಿ ಶ್ರೀಲಂಕಾ ಸರಕಾರ ಕ್ಷಮೆಯಾಚಿಸಿದೆ. ''ಸರಣಿ ಸ್ಫೋಟ ನಡೆದ ಕೆಲವು ದಿನಗಳ ಮೊದಲೇ ಬಾಂಬ್ ದಾಳಿಯ ಕುರಿತು ನಮಗೆ ಮಾಹಿತಿ ದೊರೆತಿತ್ತು. ಆದರೆ ಅದನ್ನು ನಾವು ಗಂಭೀರವಾಗಿ ಪರಿಗಣಿಸಲಿಲ್ಲ. ಘಟನೆ ಬಗ್ಗೆ ಮೃತರ ಕುಟುಂಬದವರು, ಗಾಯಗೊಂಡವರು ಮತ್ತು ದಾಳಿಗೊಳಗಾದ ಸಂಸ್ಥೆಗಳ ಬಳಿ ಸರಕಾರ ಕ್ಷಮೆ ಯಾಚಿಸುತ್ತದೆ,'' ಎಂದು ಶ್ರೀಲಂಕಾ ಸರಕಾರದ ವಕ್ತಾರರಾದ ರಜಿತಾ ಸೇನಾರತ್ನೆ ತಿಳಿಸಿದ್ದಾರೆ.