ಬೆಂಗಳೂರು, ಜ 24 (DaijiworldNews/SK): ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಶೀಘ್ರವೇ 900ಕ್ಕೂ ಹೆಚ್ಚು ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೇ ಆರಂಭಿಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಈಗಾಗಲೇ ಬೆಂಗಳೂರಿನಲ್ಲಿ ಪಿಎಸ್ ಐ ಪರೀಕ್ಷೆ ಬಹಳ ಸುಸೂತ್ರವಾಗಿ ನಡೆದಿದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದಿಲ್ಲ. ಪರೀಕ್ಷೆಗೆ ಅಭ್ಯರ್ಥಿಗಳಿಗೆ ಯಾವುದೇ ಬ್ಲೂಟೂತ್ ಕೂಡಾ ತರಲು ಸಾಧ್ಯವಾಗಿಲ್ಲ. ಪರೀಕ್ಷೆಗೆ 54 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿದ್ದು, ಇದರಲ್ಲಿ 65% ರಿಂದ 70% ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಆದಷ್ಟು ಮೌಲ್ಯಮಾಪನ ಮಾಡಿ ರಿಸಲ್ಟ್ ಕೊಟ್ಟು ನೇಮಕಾತಿ ಪ್ರಕ್ರಿಯೆ ಶುರು ಮಾಡುತ್ತೇವೆ ಎಂದರು.
ಈಗಾಗಲೇ 403 PSI ಹುದ್ದೆಗೆ ನೋಟಿಫಿಕೇಶನ್ ಮುಗಿದು, ದೈಹಿಕ ಪರೀಕ್ಷೆ ಕೂಡಾ ಮುಗಿದಿದೆ. ಮುಂದಿನ ಹಂತದಲ್ಲಿ ನೇಮಕಾತಿಗೂ ಪರೀಕ್ಷೆ ಮಾಡುತ್ತೇವೆ. ಅದನ್ನು ಕೂಡ KEA ಮೂಲಕವೇ ನಡೆಸುತ್ತೇವೆ.
ಇನ್ನು 403 ಪೋಸ್ಟ್ಗೆ ಪರೀಕ್ಷೆ ಮುಗಿದ ಬಳಿಕ 660 PSI ಪೋಸ್ಟ್ಗೆ ಆರ್ಥಿಕ ಇಲಾಖೆಯ ಅನುಮತಿ ಪಡೆದಿದ್ದೇವೆ. ಅದಕ್ಕೂ ಕೂಡಾ ನೋಟಿಫಿಕೇಶನ್ ಮಾಡುತ್ತೇವೆ.
ಒಟ್ಟಾರೆಯಾಗಿ ಎರಡು ವರ್ಷದಲ್ಲಿ ಈ ಎಲ್ಲಾ ಪೋಸ್ಟ್ಗೆ ಪ್ರಕ್ರಿಯೆ ಮುಗಿಸುತ್ತೇವೆ. ನಂತರ ನೇಮಕಾತಿ ಆದ ಮೇಲೆ ಒಂದು ವರ್ಷ ತರಬೇತಿ ನಡೆಸುವ ಚಿಂತನೆ ಇದ್ದು ಅದಷ್ಟು ಬೇಗ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತೇವೆ ಎಂದರು.