ಬೆಂಗಳೂರು, ಜ 24 (DaijiworldNews/MS): ದಿನ ಬೆಳಗಾದರೆ ಅಧಿಕಾರಕ್ಕಾಗಿ ಕಚ್ಚಾಡುವುದನ್ನೇ ಕಸುಬು ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ 136 ಸೀಟು ಇದ್ದರೂ ಕನ್ನಡಿಗರಿಗೆ ಒಂದು ಸ್ಥಿರ, ಸುಭದ್ರ ಸರ್ಕಾರ ಕೊಡುವ ಯೋಗ್ಯತೆ ಇಲ್ಲ" ಎಂದು ವಿಪಕ್ಷ ನಾಯಕ ಆರ್. ಆಶೋಕ್ ಟ್ವೀಟ್ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಲಕ್ಷಾಂತರ ಕೃಷಿ ಕಾರ್ಮಿಕರು ಮನೆ ಮಠ ಬಿಟ್ಟು ಹೊಟ್ಟೆ ಪಾಡಿಗಾಗಿ ಗುಳೆ ಹೋಗಿದ್ದಾರೆ, ಘೋಷಣೆಯಾಗಿದ್ದ 2000 ರೂಪಾಯಿ ಬರ ಪರಿಹಾರ ಎರಡು ತಿಂಗಳಾದರೂ ಇನ್ನೂ ರೈತರ ಖಾತೆಗೆ ತಲುಪಿಲ್ಲ, ಕುಸಿದಿರುವ ಕಾನೂನು ವ್ಯವಸ್ಥೆಯಿಂದ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕಾಂಗ್ರೆಸ್ ಮಂತ್ರಿಗಳಿಗೆ, ಶಾಸಕರಿಗೆ ಅಧಿಕಾರದ ಚಿಂತೆಯೇ ಹೊರತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾಳಜಿಯೇ ಇಲ್ಲ ಎಂದು ಆರೋಪಿಸಿದ್ದಾರೆ.
ಶಾಸಕರ ಮೇಲೆ, ಪಕ್ಷದ ಮೇಲೆ ಯಾವುದೇ ಹಿಡಿತವಿಲ್ಲದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಇತಿಹಾಸದಲ್ಲೇ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಆಡಳಿತದ ಮೇಲೆ ಕನಿಷ್ಠ ನಿಯಂತ್ರಣ ಸಾಧಿಸಲಾಗದ ಅಸಮರ್ಥ, ನಾಲಾಯಕ್ ಮುಖ್ಯಮಂತ್ರಿ ಎಂದು ಆರೋಪಿಸಿದ್ದಾರೆ.