ಬೆಂಗಳೂರು, ಜ 24 (DaijiworldNews/MS): ಚಿಕ್ಕಮಗಳೂರಿನ ಹಿರೇಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಪಾವತಿಸಲಾದ ತಸ್ತೀಕು( ವೇತನ) ವಾಪಸ್ ಕೇಳಿ ನೋಟಿಸ್ ನೀಡಿರುವ ಪ್ರಕರಣಕ್ಕೆ ತಿರುವು ದೊರೆತಿದೆ.
ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರ್ ಅವರದ್ದೇ ತಪ್ಪೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂದೇಶ ಪ್ರಕಟಿಸಲಾಗಿದೆ.
‘ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಾಸು ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು, ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ’ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಏನಿದು ವಿವಾದ?
ಪ್ರತಿದಿನವೂ ಕನ್ನಡದಲ್ಲೇ ಮಂತ್ರಗಳನ್ನು ಪಠಿಸುತ್ತಾ ಜಗತ್ಪ್ರಿಸಿದ್ಧಿ ಪಡೆದಿರುವ ಹಿರೇಮಗಳೂರು ಕಣ್ಣನ್ ಅವರಿಗೆ ಕಳೆದ 10 ವರ್ಷ ಗಳಿಂ ದ ನಿಗದಿಗಿಂತ ಹೆಚ್ಚುವರಿಯಾಗಿ ಗೌರವಧನ ಪಾವತಿಯಾಗಿದೆ. ಆಡಿಟಿಂಗ್ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ 4.74 ಲಕ್ಷ ರೂ.ಗಳನ್ನು ದೇವಾಲಯದ ಖಾತೆಗೆ ಮರುಪಾವತಿಸುವಂತೆ ಸೂಚಿಸಿ, ತಹಶೀಲ್ದಾರ್ ನೊಟೀಸ್ ನೀಡಿದ್ದರು.
ತಹಶೀಲ್ದಾರ್ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ, ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದರು.