ಉತ್ತರಪ್ರದೇಶ, ಜ 24 (DaijiworldNews/SK): ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಜ.22 ರಂದು ಸಂಪನ್ನಗೊಂಡಿದೆ. ಇದಾದ ಬಳಿಕ ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತಾಧಿಗಳ ದಂಡೆ ಅಯೋಧ್ಯೆಯತ್ತ ಧಾವಿಸುತ್ತಿದ್ದು, ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ರಾಮಮಂದಿರದಲ್ಲಿ ಬಾಲರಾಮನ ಪ್ರತಿಪ್ಠಾಪನೆ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದೆ. ಮಂಗಳವಾರದಿಂದಲೇ ಶ್ರೀರಾಮನ ವಿಗ್ರಹವನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗಿದ್ದು, ಮೊದಲ ದಿನದಂತೆಯೇ 2 ನೇ ದಿನವೂ ಭಕ್ತರ ಜನಸಾಗರ ಹರಿದುಬರುತ್ತಿದೆ. ಒಟ್ಟಾರೆಯಾಗಿ 2.5 ರಿಂದ 3 ಲಕ್ಷ ಜನರು ದರ್ಶನ ಮಾಡಿದ್ದು, ರಾತ್ರಿ ವೇಳೆ ಅಂದಾಜು 5 ಲಕ್ಷ ಜನರು ಬಾಲ ರಾಮನ ದರ್ಶನ ಪಡೆದಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.
ಇದೇ ವೇಳೆ ನೂಕುನುಗ್ಗಲು ಕೂಡ ಉಂಟಾಗಿದ್ದು, ಜನಸಂದಣಿ ನಿಯಂತ್ರಿಲಾಗದೆ ಉತ್ತರಪ್ರದೇಶ ಪೊಲೀಸರು ಹರಸಾಹಸ ಪಡುವಂತಾಗಿದೆ. ಇಷ್ಟು ಮಾತ್ರವಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಕಾರಣ ಅಯೋಧ್ಯೆಯಲ್ಲಿ ಹೋಟೆಲ್, ರೂಮ್ ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ತಿಂಗಳ ಕಾಲದ ವರೆಗೆ ಹೋಟೆಲ್ ಗಳು ಬುಕ್ ಆಗಿದೆ ಎನ್ನಲಾಗಿದೆ. ಕೆಲವೊಂದು ಹೋಟೆಲ್ ಗಳಲ್ಲಿ ಹೆಚ್ಚಿನ ಬಾಡಿಗೆ ಕೂಡ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಇನ್ನು ಈ ವಿಚಾರವಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಉತ್ತರ ಪ್ರದೇಶ ಪೊಲೀಸರು, ಸದ್ಯಕ್ಕೆ ರಾಮಲಲ್ಲಾನ ದರ್ಶನ ಪಡೆಯಬೇಕು ಎಂಬ ಆತುರಬೇಡ. ಮಂದಿರದ ಆವರಣದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸರತಿ ಸಾಲಿಗೆ ಅಡ್ಡಿಪಡಿಸಬೇಡಿ. ಸಾಧ್ಯವಾದಷ್ಟು ದಿನ ಅಯೋಧ್ಯೆ ಭೇಟಿ ಮುಂದೂಡಿ,'' ಎಂದು ಮನವಿ ಮಾಡಿಕೊಂಡಿದ್ದಾರೆ.