ಬೆಂಗಳೂರು, ಜ 23(DaijiworldNews/ AK):ಬಿಜೆಪಿ ಗೂಂಡಾಗಳು ಕೈಯಲ್ಲಿ ಮಂತ್ರಾಕ್ಷತೆ ಹಿಡಿದಿದ್ದರೆ, ಬಗಲಲ್ಲಿ ದೊಣ್ಣೆ ಹಿಡಿದಿದ್ದಾರೆ. ಈ ಗೂಂಡಾಗಳ ಗೊಡ್ಡು ಬೆದರಿಕೆಗೆ ಯಾವುದೇ ಕಾಂಗ್ರೆಸಿಗ ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ ಖಂಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅಸ್ಸಾಂನಲ್ಲಿ ಕಳೆದೆರಡು ದಿನಗಳಿಂದ ಈ ಯಾತ್ರೆಯನ್ನು ತಡೆಯಲಾಗಿದೆ. ಇಂದು ಗುವಾಹಟಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಆ ಮೂಲಕ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಿದೆಯೋ ಸತ್ತಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಹೇಳಿದರು.
ಅಸ್ಸಾಂ ಸರ್ಕಾರದ ಈ ನಡೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ರಾಹುಲ್ ಗಾಂಧಿ ದೇಶದ ಮನಸ್ಸುಗಳನ್ನು ಒಗ್ಗೂಡಿಸಲು, ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನ್ಯಾಯ ಒದಗಿಸಲು ಮಣಿಪುರದಿಂದ ಮುಂಬೈವರೆಗೂ ಎರಡನೇ ಹಂತದ ಭಾರತ ಜೋಡೋ ನ್ಯಾಯ ಯಾತ್ರೆ ಹಮ್ಮಿಕೊಂಡಿದ್ದಾರೆ.
ಈ ಯಾತ್ರೆಯಿಂದ ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿದೆ. ಹೀಗಾಗಿ ಅವರ ಯಾತ್ರೆಯನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.