ಗದಗ, ಜ 23 (DaijiworldNews/ AK): ಪ್ರಧಾನಿ ಮೋದಿ ಅವರು ನಿನ್ನೆ ಅಯೊಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನ ನೆರೆವೇರಿಸಿದ್ದಾರೆ. ಇದೀಗ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಟೀಕೆ ಮಾಡುವುದಕ್ಕೆ ಆರಂಭಿಸಿದ್ದಾರೆ.
ಮೋದಿ ಉಪವಾಸ ವ್ರತ ಮಾಡಿದ್ದು ಅನುಮಾನ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಶಾಸಕ ಜಿ.ಎಸ್.ಪಾಟೀಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಿಂದೂ ಸಂಪ್ರದಾಯ ಮುರಿದಿದ್ದಾರೆ ಎಂದು ಟೀಕಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಶಾಸಕ ಜಿ.ಎಸ್.ಪಾಟೀಲ್, ದೇವರ ಪ್ರತಿಷ್ಠಾಪನೆ ಮಾಡುವಾಗ ಹಿಂದೂ ಸಂಪ್ರದಾಯದಂತೆ ದಂಪತಿ ಸಮೇತ ಪೂಜೆ ಸಲ್ಲಿಸಬೇಕು. ಆದ್ರೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಳೆ ಮೋದಿ ಶಿಷ್ಟಾಚಾರ ಮರೆತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾರ್ವಭೌಮ, ಒನ್ ಮ್ಯಾನ್ ಆರ್ಮಿ. ಸಂಪುಟದ ಸಹೋದ್ಯೋಗಿಗಳು, ಪಕ್ಷದ ನಾಯಕರು ಬೇಕಾಗಿಲ್ಲ, ಎಲ್ಲಾ ಅವರೇ ಮಾಡಿ ಹಿಂದೂ ಸಂಪ್ರದಾಯ ಮುರಿದಿದ್ದಾರೆ. ಅವರಿಗೆ ಕುಟುಂಬ ಇಲ್ಲದಿದ್ರೆ ದಂಪತಿಯನ್ನು ಕೂರಿಸಿ ಪೂಜೆ ಮಾಡಿಸಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಹಿಂದೂ ಸಂಪ್ರದಾಯ ಮುರಿದಿದ್ದಾರೆ. ಸಂಪ್ರದಾಯ ಮುರಿದಾಗ ಕೆಟ್ಟ ಘಟನೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.