ಅಯೋಧ್ಯೆ, ಜ 22 (DaijiworldNews/AA): ಸುಮಾರು ಶತಕಗಳ ನಂತರ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. 51 ಇಂಚಿನ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 7 ಸಾವಿರ ಗಣ್ಯರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಿಂದಲೇ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿದ್ದು, ಮಧ್ಯಾಹ್ನ 12.20 ಮತ್ತು 12.45ರ ಅಭಿಜಿನ್ ಮುಹೂರ್ತದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನ ವಿಧಿ ಮುಖ್ಯ ಹಂತವನ್ನು ತಲುಪಲಿದೆ. ಬಳಿಕ ಪ್ರಧಾನಿ ನರೆಂದ್ರ ಮೋದಿ ರಾಮಲಲ್ಲಾನ ಮೂರ್ತಿಗೆ ನೇತ್ರೋನ್ಮಿಲನ ಕ್ರಿಯೆ ನಡೆಸಿಕೊಡಲಿದ್ದಾರೆ. ಇನ್ನು ಈ ಸಂದರ್ಭ ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಪ್ರಧಾನ ಅರ್ಚಕರು ಮಾತ್ರ ಉಪಸ್ಥಿತರಿರುತ್ತಾರೆ.
ಇನ್ನು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಲಿದೆ. ಉದ್ಘಾಟನೆಯಾದ ಬಳಿಕ ಸೇನಾ ಹೆಲಿಕಾಪ್ಟರ್ ನಿಂದ ಮಂದಿರಕ್ಕೆ ಪುಷ್ಪವೃಷ್ಟಿ ಮಾಡಲಾಗುತ್ತದೆ. ಮೂರ್ತಿಯ ಪ್ರಾಣ ಪ್ರತಿಷ್ಠಾಪನ ವಿಧಿಗಳು ಸಂಪೂರ್ಣವಾದ ಬಳಿಕ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಸಾವಿರಾರು ಗಣ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.