ಬೆಂಗಳೂರು,23 (Daijiworld News/AZM):ರಾಜ್ಯದಲ್ಲಿ ಇಂದು 2ನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ.65ರಷ್ಟು ಮತದಾನ ನಡೆದಿದೆ.
ಸಂಜೆ 6 ಗಂಟೆಯೊಳಗೆ ಮತದಾನ ಕೊನೆಗೊಂಡಿದ್ದು,ಸಣ್ಣಪುಟ್ಟ ಗೊಂದಲಗಳು ಹೊರತುಪಡಿಸಿದರೆ ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ ಶಾಂತಿಯುವಾಗಿ ಮತದಾನ ನಡೆದಿದೆ.ಇನ್ನು ರಾಯಚೂರಿನಲ್ಲಿ ಎಂಜಿನೀಯರಿಂಗ್ ವಿದ್ಯಾರ್ಥಿನಿ ಮಧುಪತ್ತಾರ ನಿಗೂಢ ಸಾವು ಪ್ರಕರಣ ಖಂಡಿಸಿ ಹಲವು ಮತಗಟ್ಟೆಗಳಲ್ಲಿ ಮತದಾರರು ಕಪ್ಪು ಪಟ್ಟಿ ಧರಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ಬೆಳಗಾವಿ, ಚಿಕ್ಕೋಡಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಹಾವೇರಿ, ವಿಜಯಪುರ, ಧಾರವಾಡ, ಕಲಬುರಗಿ, ಉತ್ತರ ಕನ್ನಡ,ದಾವಣಗೆರೆ, ಬೀದರ್, ಶಿವಮೊಗ್ಗ ಜಿಲ್ಲೆಗಳಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದುದು ಕಂಡು ಬಂದಿತು.
ಕಲಬುರಗಿ, ವಿಜಯಪುರ ಮುಂತಾದೆಡೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿ ವಿವಿಧ ಪಕ್ಷಗಳ ಮುಖಂಡರು ಅವರ ಮನವೊಲಿಕೆ ಯತ್ನದಲ್ಲಿ ತೊಡಗಿದ್ದರು. ಹೈವೋಲ್ಟೆಜ್ ಕ್ಷೇತ್ರಗಳಾದ ಶಿವಮೊಗ್ಗ, ಕಲಬುರಗಿ, ಉತ್ತರ ಕನ್ನಡ ಮುಂತಾದೆಡೆ ಇಂದು ಬೆಳಗ್ಗೆ 7 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು. ಅಭ್ಯರ್ಥಿಗಳು ಹಾಗೂ ಗಣ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯಲ್ಲಿ ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದರು.
ಅಲ್ಲಲ್ಲಿ ಮತ ಯಂತ್ರ ಕೈಗೊಟ್ಟು, ಹಲವೆಡೆ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು. ಇನ್ನು ಕೆಲವೆಡೆ ಮತದಾನ ತಡವಾಗಿ ಆರಂಭವಾಗಿತ್ತು. ಇನ್ನು ಕೆಲವೆಡೆ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸೇರಿದಂತೆ ಸಣ್ಣ ಪುಟ್ಟ ಗೊಂದಲಗಳಷ್ಟೆ ಇಂದು ಕಂಡುಬಂದಿದ್ದವು.