ತುಮಕೂರು,ಜ 21(DaijiworldNews/SK):ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 12000 ರೂ.ಗಳೊಂದಿಗೆ 1500 ರೂ. ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸಿದ್ದಗಂಗಾ ಮಠ ಕ್ಯಾತ್ಸಂದ್ರ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದರೊಂದಿಗೆ ಮಾತನಾಡಿ,ಒಟ್ಟು ನಮ್ಮ ಸರ್ಕಾರದಿಂದ ಕ್ವಿಂಟಾಲಿಗೆ 1500 ರೂ.ಗಳನ್ನು ಒದಗಿಸಲಾಗುವುದು. 3000 ರೂ.ಗಳಿಗೆ ಬೇಡಿಕೆ ಇದ್ದರೂ ಸರ್ಕಾರದ ತನ್ನ ಶಕ್ತ್ಯಾನುಸಾರ ಬೆಂಬಲ ಬೆಲೆ ನೀಡುತ್ತಿದ್ದು, ಎಂ.ಎಸ್.ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ಎಂದರು.
ಕೇಂದ್ರ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ರಾಜ್ಯ ಸರ್ಕಾರ ಕೊಬ್ಬರಿ ಬೆಳೆಗಾರರಿಗೆ 1500 ಹೆಚ್ಚಾಗಿ ನೀಡಲಿದೆ ಎಂದರು.
ಹಿಂದಿನ ಸರ್ಕಾರ ಜನವರಿ 21 ನ್ನು ದಾಸೋಹ ದಿನ ಎಂದು ಆಚರಿಸಲು ಘೋಷಣೆ ಮಾಡಿದ್ದರ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ಯಾವಾಗ ಮಾಡಿದರು, ಯಾವ ಸಂದರ್ಭದಲ್ಲಿ ಹಾಗೂ ಯಾಕಾಗಿ ಮಾಡಿದರು ಎಂದು ನನಗೆ ತಿಳಿದಿಲ್ಲ , ವಿಚಾರ ಮಾಡಲಾಗುವುದು ಎಂದರು.
ಕುಣಿಗಲ್ ಸ್ಟಡ್ ಫಾರಂ ಸ್ಥಳಾಂತರ ಕ್ಕೆ ಸಲಹೆ
ಟಿಪ್ಪು ಸುಲ್ತಾನರ ಕಾಲದ ಕುಣಿಗಲ್ ಸ್ಟಡ್ ಫಾರಂನ್ನು ಸರ್ಕಾರ ಮುಚ್ಚುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಬೆಂಗಳೂರಿನ ಹೃದಯ ಭಾಗದಲ್ಲಿ ರೇಸ್ ಕೋರ್ಸ್ ಇದ್ದು, ಅಲ್ಲಿಗೆ ಸ್ಥಳಾಂತರ ಮಾಡಿ ಎಂದು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.ಕುಣಿಗಲ್ ನಲ್ಲಿ 400 ಏಕರೆಯಷ್ಟು ಜಮೀನು ಇದ್ದು, ಇಲ್ಲಿ 80 ಏಕರೆ ಯಷ್ಟಿದೆ. ಅಲ್ಲಿ ಸ್ಥಳ ನೀಡುವುದಾಗಿ ಹೇಳಿದ್ದೇನೆ ಎಂದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಅಲ್ಲಿ ಇಂಟಿ ಗ್ರೇಟೆಡ್ ಟೌ ನ್ ಶಿಪ್ ಪ್ರಾರಂಭಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂಬ ಬಗ್ಗೆ ಅವರನ್ನೇ ಕೇಳಿ ಎಂದು ಮುಖ್ಯಮಂತ್ರಿಗಳು ಹೇಳಿದರು.