ಮೈಸೂರು, ಜ 20 (DaijiworldNews/AA): ಅಯೋಧ್ಯೆಯ ಬಾಲ ರಾಮನ ಮೂರ್ತಿ ಕೆತ್ತನೆಗೆ ಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ಶ್ರೀರಾಮನ ಮಂದಿರ ನಿರ್ಮಾಣ ಮಾಡಲಾಗುತ್ತದೆ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಅವರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 22 ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗುತ್ತದೆ. ಎಲ್ಲರ ಬಳಿ ದೇಣಿಗೆ ಸಂಗ್ರಹ ಮಾಡಿ ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ. ಇನ್ನು ಕಪ್ಪು ಕಲ್ಲು ಸಿಕ್ಕ ಸ್ಥಳದ 4 ಕುಂಟೆ ಜಮೀನನ್ನು ಮಂದಿರ ನಿರ್ಮಾಣಕ್ಕೆ ಜಮೀನು ಮಾಲೀಕ ಸಂತೋಷದಿಂದ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ನಮ್ಮ ಕ್ಷೇತ್ರದ ಗ್ರಾಮದಲ್ಲೆ ಕಪ್ಪು ಕಲ್ಲು ದೊರೆತಿದೆ. ಆ ಕಲ್ಲಿನಲ್ಲಿ ಮೂಡಿದ ರಾಮಲಲ್ಲಾನ ಮೂರ್ತಿ ದರ್ಶನ ಪ್ರಪಂಚದಾದ್ಯಂತ ಶಾಶ್ವತವಾಗಿದೆ. ಇಲ್ಲಿ ನಿರ್ಮಾಣವಾಗುವ ರಾಮ ಮಂದಿರದಲ್ಲಿನ ಮೂರ್ತಿ ಕೆತ್ತನೆಗೆ ಅರುಣ್ ಯೋಗಿರಾಜ್ ಅವರನ್ನು ಸಂಪರ್ಕಿಸುತ್ತೇವೆ. ಅವರ ನಿರ್ದೇಶನದಂತೆ ಎಲ್ಲವೂ ನಡೆಯುತ್ತದೆ ಎಂದರು.