ರಾಜಸ್ಥಾನ, ಜ 20(DaijiworldNews/AA): ಯುಪಿಎಸ್ ಸಿ ಪರೀಕ್ಷೆಯು ಕಠಿಣವಾದ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಕಠಿಣವಾದ ಪರಿಶ್ರಮ, ಛಲ, ದೃಢವಾದ ಮನಸ್ಸಿದ್ದರೆ ಸಾಕು. ಬೇರೆಲ್ಲಾ ನ್ಯೂನತೆಗಳು ಗಣನೆಗೆ ಬರುವುದಿಲ್ಲ. ಇದೇ ರೀತಿ ತನ್ನ ಆರೋಗ್ಯ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ತನ್ನ ಕನಸನ್ನು ನನಸಾಗಿಸಿಕೊಂಡ ಐಎಎಸ್ ಅಧಿಕಾರಿ ಉಮ್ಮುಲ್ ಖೇರ್ ಅವರ ಯಶೋಗಾಥೆ ಇದು.
ಮೂಲತಃ ರಾಜಸ್ಥಾನದ ಪಾಲಿಯವರಾದ ಉಮ್ಮುಲ್ ಅವರು ಪ್ರಸ್ತುತ ದೆಹಲಿಯ ತ್ರಿಲೋಕಪುರಿ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ. ಆಕೆಯ ಕುಟುಂಬವು ಜೀವನೋಪಾಯಕ್ಕಾಗಿ ದೆಹಲಿಗೆ ತೆರಳುವುದು ಸವಾಲಿನ ಸಂಗತಿಯಾಗಿತ್ತು. ಉಮ್ಮುಲ್ ಅವರು ದುರ್ಬಲವಾದ ಮೂಳೆ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇದರಿಂದ ಅವರಿಗೆ 16 ಬಾರಿ ಮೂಳೆ ಮುರಿತಗಳಾಗಿದ್ದು, 8 ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಉಮ್ಮುಲ್ ಅವರಿಗೆ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಆರ್ಥಿಕ ಸಮಸ್ಯೆ ಬಹಳ ಕಾಡುತ್ತಿತ್ತು. ಆರ್ಥಿಕ ಸಮಸ್ಯೆಯನ್ನು ದೂರ ಮಾಡುವ ಸಲುವಾಗಿ ಉಮ್ಮುಲ್ ಮಕ್ಕಳಿಗೆ ಟ್ಯೂಷನ್ ನೀಡಲು ಪ್ರಾರಂಭಿಸುತ್ತಾರೆ. ಆ ಟ್ಯೂಷನ್ ಮಾಡಿ ಬರುವ ಹಣವನ್ನು ತನ್ನ ಓದಿಗಾಗಿ ಬಳಸಿಕೊಳ್ಳುತ್ತಿದ್ದರು. ಉಮ್ಮುಲ್ ಅವರ ಕುಟುಂಬ ಆಕೆಯ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಲಿಲ್ಲ. ಇದು ಉಮ್ಮುಲ್ ಅವರ ದೃಢಸಂಕಲ್ಪವು ಆಕೆಯನ್ನು ಮನೆಯಿಂದ ಓಡಿಹೋಗುವಂತೆಯೂ ಹಾಗೂ ಕೊಳಗೇರಿಯಲ್ಲಿ ವಾಸಿಸುವಂತೆ ಮಾಡಿತ್ತು. ಅಲ್ಲಿಯೂ ಅವರು ಮಕ್ಕಳಿಗೆ ಟ್ಯೂಷನ್ ಹೇಳಿಕೊಡುವುದನ್ನು ಮುಂದುವರೆಸುತ್ತಾರೆ.
ಬಳಿಕ ಉಮ್ಮುಲ್ ಅವರು NGO ನ ಸಹಕಾರದೊಂದಿಗೆ 10 ನೇ ತರಗತಿಯವರೆಗೆ ತನ್ನ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಉಮ್ಮುಲ್ ಅವರು ಕುಟುಂಬವು ಅವರ ಉನ್ನತ ಶಿಕ್ಷಣಕ್ಕೆ ಸಮ್ಮತಿ ನೀಡದೇ ಇದ್ದರೂ ಅವರು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸಿದರು. ನಂತರ ಅವರು 12 ನೇ ತರಗತಿಯನ್ನು ಶೇ. 91ರಷ್ಟು ಅಂಕದೊಂದಿಗೆ ಉತ್ತೀರ್ಣರಾದರು. ಗಾರ್ಗಿ ಕಾಲೇಜಿನಿಂದ ಪದವಿ ಪಡೆದ ಉಮ್ಮುಲ್ ಅವರು ಜೆಎನ್ ಯು ನಲ್ಲಿ ಶೈಕ್ಷಣಿಕ ಪ್ರಯಾಣವನ್ನು ಮುಂದುವರೆಸಿ ಎಂಎ ಪದವಿ ಪೂರ್ಣಗೊಳಿಸುತ್ತಾರೆ.
ಬಳಿಕ ಉಮ್ಮುಲ್ ಅವರು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸುತ್ತಾರೆ. ಕೊನೆಗೆ ತಾವು ಕಂಡ ಕನಸಿನಂತೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಜೊತೆಗೆ 420 ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ. ಆಕೆಯ ಪರಿಶ್ರಮ ಮತ್ತು ಶೈಕ್ಷಣಿಕ ಸಾಧನೆಗಳಿಂದ ಜೆಎನ್ ಯುನಲ್ಲಿ ಎಂಫಿಲ್ ಹಾಗೂ ಪಿಎಚ್ ಡಿ ಮಾಡಲು ಪ್ರವೇಶವನ್ನು ಪಡೆಯುತ್ತಾರೆ.
ಇಂದು ತನ್ನೆಲ್ಲಾ ಪರಿಶ್ರಮದ ಫಲವಾಗಿ ಉಮ್ಮುಲ್ ಅವರು ಐಎಎಸ್ ಅಧಿಕಾರಿಯಾಗಿದ್ದು, ಎಲ್ಲಾ ಯುಪಿಎ ಎಸ್ ಸಿ ಅಭ್ಯರ್ಥಿಗಳಿಗೂ ಮಾದರಿಯಾಗಿದ್ದಾರೆ.