ಕಲಬುರಗಿ, ಜ 19 (DaijiworldNews/AK): ರಾಮ ಮಂದಿರ ಅನ್ನುವುದು ಧಾರ್ಮಿಕತೆ, ಧರ್ಮದ ಸಂಕೇತ, ಧರ್ಮ ಜಾಗೃತಿ ಮಾಡಲು, ದೇಶವನ್ನು ಒಂದು ಮಾಡಲು ಇರುವಂಥದ್ದು, ಹೀಗಾಗಿ ರಾಮ ಮಂದಿರದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಬರಬಾರದು. ಆಹ್ವಾನ ಬಂದಿರುವವರು ಅಯೋಧ್ಯೆಗೆ ಹೋಗುವುದು ಬಿಡುವುದು ಅವರವರ ಇಷ್ಟ. ಆದರೆ ನನಗೆ ವೈಯಕ್ತಿಕವಾಗಿ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ಎಂಎಲ್ ಸಿ ಜಗದೀಶ್ ಶೆಟ್ಟರ್ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡುವಾಗ 2 ಕೋಟಿ ರೂಪಾಯಿ ಸಂಗ್ರಹ ಮಾಡಿ ಕೊಟ್ಟಿದ್ದೆ. ಆದರೆ ನನಗೆ ಆಹ್ವಾನ ಬಂದಿಲ್ಲ. ಹೀಗಾಗಿ ನಾನು ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಹೋಗುವುದಿಲ್ಲ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಿರುವುದು ಬಹಳ ಖುಷಿ ತಂದಿದೆ. ಆದರೆ ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ. ಹೀಗಾಗಿ ನಾನು ಅಂದು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ, ಹಿಂದೂ ವಿರೋಧಿ ಇದ್ದರೆ ರಾಜ್ಯದಲ್ಲಿ 135 ಸ್ಥಾನ ಹೇಗೆ ಬರುತ್ತಿತ್ತು? ಬಿಜೆಪಿಯಿಂದ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ, ನಾನು ವಾಪಸ್ ಬಿಜೆಪಿಗೆ ಹೋಗುವ ಪ್ರಶ್ನೆಯೆ ಇಲ್ಲ ಎಂದು ಶೆಟ್ಟರ್ ಹೇಳಿದರು.