ಅಸ್ಸಾಂ, ಜ 19 (DaijiworldNews/MS): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಗುರುವಾರ ಅಸ್ಸಾಂ ನ ಜೋರ್ಹತ್ ಪಟ್ಟಣದಲ್ಲಿ ಅನುಮತಿಸಲಾದ ಮಾರ್ಗದ ಬದಲಾಗಿ ಬೇರೆ ಮಾರ್ಗದಲ್ಲಿ ಸಂಚರಿಸಿದ ಆರೋಪದ ಮೇಲೆ ಅಸ್ಸಾಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಯಾತ್ರೆಯ ಮಾರ್ಗ ಬದಲಾವಣೆಯಿಂದಾಗಿ ರಾಹುಲ್ ಗಾಂಧಿ ಮತ್ತು ಅದರ ಮುಖ್ಯ ಸಂಘಟಕ ಕೆಬಿ ಬೈಜು ಅವರ ವಿರುದ್ದ ಪ್ರಕರಣ ದಾಖಲಾಗಿದೆ. ಅನುಮತಿಯಂತೆ ಯಾತ್ರೆ, ಕೆಬಿ ರಸ್ತೆಯತ್ತ ಸಾಗಬೇಕಿತ್ತು.
ಕಾಂಗ್ರೆಸ್ನ ಭಾರತ್ ಜೋಡೋ ನ್ಯಾಯ್ ಯಾತ್ರೆ ಗುರುವಾರ ನಾಗಾಲ್ಯಾಂಡ್ನಿಂದ ಶಿವಸಾಗರ್ ಜಿಲ್ಲೆಯ ಹಲುವಾಟಿಂಗ್ ಮೂಲಕ ಅಸ್ಸಾಂ ಪ್ರವೇಶಿಸಿದೆ.
ಅಧಿಕಾರಿಗಳ ಪ್ರಕಾರ, "ಅನುಮತಿಸಿದ ರಸ್ತೆ ಬದಲಿಸಿ ನಗರದಲ್ಲಿ ಬೇರೆ ಮಾರ್ಗದಲ್ಲಿ ಯಾತ್ರೆ ಕೈಗೊಳ್ಳಲಾಯಿತು. ಇದರಿಂದ ಆ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗು ಜನರು ಏಕಾಏಕಿ ನುಗ್ಗಿದ್ದರಿಂದ ನೂಕುನುಗ್ಗಲು ಪರಿಸ್ಥಿತಿ ಉಂಟಾಗಿದ್ದು, ಕಾಲ್ತುಳಿತಕ್ಕೊಳಗಾಗುವ ಸ್ಥಿತಿ ನಿರ್ಮಾಣವಾಗಿತ್ತು.ಯಾತ್ರೆ ಮತ್ತು ಅದರ ಮುಖ್ಯ ಆಯೋಜಕರ ವಿರುದ್ಧ ಜೋರ್ಹತ್ ಸದರ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಎಫ್ಐಆರ್ ದಾಖಲಿಸಲಾಗಿದೆ" ಎಂದು ಹೇಳಿದ್ದಾರೆ.
ಯಾತ್ರೆಯುದ್ದು, ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಜೊತೆಗೆ ಜಿಲ್ಲಾಡಳಿತದ ನಿಯಮಗಳನ್ನು ಅನುಸರಿಸಿಲ್ಲ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.