ನವದೆಹಲಿ, ಎ23(Daijiworld News/SS): ಇಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳ ಹಲವಾರು ಘಟಾನುಘಟಿ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಈ ನಡುವೆ, ಗುಜರಾತ್ನ ಅಹಮದಾಬಾದ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಮತದಾನ ಮಾಡುವ ಮುನ್ನ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದು ಬಳಿಕ ಗುಜರಾತ್ನ ಅಹಮದಾಬಾದ್ನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿ ಮತದಾನ ಮಾಡುವ ಯುವ ಮತದಾರರಿಗೆ ನಾನು ಸ್ವಾಗತಿಸುತ್ತೇನೆ ಮತ್ತು ಶುಭಕಾಮನೆಗಳನ್ನು ಸಲ್ಲಿಸುತ್ತೇನೆ. ಮೊದಲ ಬಾರಿ ಮತದಾನ ಮಾಡುವವರು ದೇಶದ ಭವಿಷ್ಯವನ್ನು ಉಜ್ವಲ ಮಾಡಲು ಮತದಾನ ಮಾಡಬೇಕಾಗಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಲೋಕಸಭೆ ಕ್ಷೇತ್ರ, ಉತ್ತರ ಪ್ರದೇಶದ 10, ಬಿಹಾರ್ನ 5, ಅಸ್ಸಾಂನ 4, ಗುಜರಾತ್ನ 26, ತ್ರಿಪುರಾದ 1, ದಮನ್ ಮತ್ತು ಡಿಯುನ 1, ದಾದ್ರ ಮತ್ತು ನಗರ್ ಹವೇಲಿಯ 1, ಪಶ್ಚಿಮ ಬಂಗಾಳದ 5, ಮಹಾರಾಷ್ಟ್ರದ 14, ಒಡಿಶಾದ 6, ಗೋವಾದ 2, ಕರ್ನಾಟಕದ 14, ಕೇರಳದ 20 ಮತ್ತು ಛತ್ತೀಸ್ಗಢದ 11 ಕ್ಷೇತ್ರಗಳು ಸೇರಿ ಒಟ್ಟು 117 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಎಲ್ಲೆಡೆ ಶಾಂತಿಯುವಾಗಿ ಮತದಾನವಾಗುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್, ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂಸಿಂಗ್ ಯಾದವ್, ರಾಷ್ಟ್ರೀಯ ಜನತಾದಳ ಪಕ್ಷದ ಶರದ್ ಯಾದವ್ ಈ ಹಂತದಲ್ಲಿ ಸ್ಪರ್ಧಿಸಿರುವ ಪ್ರಮುಖರಾಗಿದ್ದಾರೆ. ಮೊದಲ ಬಾರಿಗೆ ಮತದಾನದ ಹಕ್ಕು ಪಡೆದು, ಮತ ಚಲಾಯಿಸುತ್ತಿರುವವರು ಜವಾಬ್ದಾರಿಯುತ ಪ್ರಜೆಯಾಗಲು ಕಾತರದಿಂದ ಕಾಯುತ್ತಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.