ರಾಯಚೂರು, ಜ 16(DaijiworldNews/PC): ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿ ಇನ್ನು ಒಂದು ವಾರದಲ್ಲಿ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ಇದ್ದಾಗ ಯಾರದ್ದೋ ಜಮೀನು ಮತ್ತೊಬ್ಬರಿಗೆ ಹಣ ಪಾವತಿಯಾಗಿತ್ತಿತ್ತು. ರೈತರ ಬೆಳೆಯೇ ಬೇರೆ ಪರಿಹಾರ ಬರುವುದೇ ಬೇರೆ ಬೆಳೆಗೆ. ಅಧಿಕಾರಿಗಳು ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಈಗ ಇದೆಲ್ಲಾ ಸರಿಮಾಡಿ ಬೆಳೆಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗುತ್ತದೆ ಎಂದರು.
ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದ್ದು ಇನ್ನು ಒಂದು ವಾರದಲ್ಲಿ ಮೊದಲ ಕಂತಿನ ಹಣ ಬರುತ್ತದೆ. 12 ಲಕ್ಷ ಜನರಿಗೆ ಆರ್ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ಜನರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸುತ್ತೇವೆ. 25-30 ಲಕ್ಷ ಜನರಿಗೆ ಸಿಗುತ್ತದೆ ಎಂದರು.
ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದು, ಹಣ ಬಂದಿಲ್ಲ. ಹೀಗಾಗಿ ನಾವೇ ರೈತರಿಗೆ 2 ಸಾವಿರ ರೂಪಾಯಿವರೆಗೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಮೊದಲ ಕಂತಿನ ಹಣ 800-900 ಕೋಟಿ ಆಗುತ್ತದೆ. ಕೇಂದ್ರ ಸರ್ಕಾರದ ಬಳಿ ಒಟ್ಟು 18,172 ಕೋಟಿ ರೂ. ಪರಿಹಾರ ಕೇಳಿದ್ದೇವೆ. ವಿವಿಧ ನಿಯಮಗಳ ಪರಿಷ್ಕರಣೆಗೆ ಪ್ರಧಾನಮಂತ್ರಿ, ಗೃಹಸಚಿವರಿಗೆ ಮನವಿ ಮಾಡಿದ್ದೇವೆ ಎಂದರು.
ಜನಗಳಿಗೆ ಸುಲಭವಾಗಿ ದಾಖಲೆಗಳು ಸಿಗಲು ರಾಜ್ಯದ 31 ಜಿಲ್ಲೆಗಳ, 31 ತಾಲೂಕುಗಳಲ್ಲಿ ದಾಖಲೆಗಳನ್ನ ಡಿಜಿಟಲೈಸ್ ಮಾಡುತ್ತಿದ್ದೇವೆ. ಇದರಿಂದ ಸರ್ವೆ ಇಲಾಖೆಯ ಬಗ್ಗೆ ವಿವಿಧ ರೀತಿಯ ದೂರುಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಆನ್ಲೈನ್ನಲ್ಲೇ ಎಲ್ಲಾ ದಾಖಲೆಗಳನ್ನು ಪಡೆಯುವಂತ ಶಾಶ್ವತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.