ತೆಲಂಗಾಣ, ಜ 16 (DaijiworldNews/AA): UPSC ಪರೀಕ್ಷೆಯು ಅತ್ಯಂತ ಕಠಿಣ ಪರೀಕ್ಷೆಯಾಗಿದ್ದು, ಪ್ರತಿವರ್ಷ ಲಕ್ಷಾಂತರ ಮಂದಿ ಈ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಕೇವಲ ಸಾವಿರ ಸಂಖ್ಯೆಯ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಾರೆ. ಈ ರೀತಿ ಕಠಿಣ ಪರಿಶ್ರಮದಿಂದ ಛಲ ಬಿಡದೆ IAS ಅಧಿಕಾರಿಯಾದ ಉಮಾ ಹರಥಿ ಅವರ ಯಶೋಗಾಥೆ ಇದು.
ಮೂಲತಃ ತೆಲಂಗಾಣದ ನಲ್ಗೊಂಡ ಜಿಲ್ಲೆಯವರಾದ ಉಮಾ ಹರಥಿ ಅವರ ತಂದೆ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹಾಗೂ ತಾಯಿ ಗೃಹಿಣಿ.
ಉಮಾ ಹರಥಿ ಅವರು ತಮ್ಮ ಪ್ರಾಥಮಿಕ ಶಿಕ್ಷಣ, ಕಾಲೇಜು ಶಿಕ್ಷಣವನ್ನು ಹೈದರಾಬಾದ್ ನಲ್ಲಿ ಪಡೆಯುತ್ತಾರೆ. ಬಳಿಕ ಐಐಟಿ ಹೈದರಾಬಾದ್ ನಲ್ಲಿ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಬಳಿಕ UPSC ಪರೀಕ್ಷೆ ಬರೆಯುವ ಬಯಕೆಯಿಂದ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಉಮಾ ಅವರಿಗೆ UPSC ಪರೀಕ್ಷೆ ಬರೆಯಲು ಅವರ ತಂದೆಯ ಪೂರ್ಣ ಸಹಕಾರವಿರುತ್ತದೆ. ತಂದೆ ನೀಡಿದ ಪ್ರೋತ್ಸಾಹದಿಂದ ಅವರು UPSC ಪರೀಕ್ಷೆ ಬರೆಯುತ್ತಾರೆ.
ಉಮಾ ಅವರ ಐಎಎಸ್ ಅಧಿಕಾರಿಯಾಗುವ ಹಾದಿ ಸುಗಮವಾಗಿರಲಿಲ್ಲ. ಉಮಾ ಅವರು ಒಂದಲ್ಲ ಎರಡಲ್ಲ ನಾಲ್ಕು ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. ಐದನೇ ಬಾರಿಗೆ UPSC ಪರೀಕ್ಷೆ ಬರೆಯುವವರೆಗೆ ಮೇನ್ಸ್ ಪರೀಕ್ಷೆಗೆ ಭೂಗೋಳ ಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಉಮಾ ಅವರು, ಭೂಗೋಳ ಶಾಸ್ತ್ರ ವಿಷಯವು ತನಗೆ ಹೊಂದುವಂತಹ ವಿಷಯವಲ್ಲ ಎಂಬುದನ್ನು ಅರಿಯುತ್ತಾರೆ. ಬಳಿಕ ಅವರು 2022ರಲ್ಲಿ ಐದನೇ ಬಾರಿ UPSC ಪರೀಕ್ಷೆ ಬರೆಯುವಾಗ ಮೇನ್ಸ್ ಪರೀಕ್ಷೆಗೆ ಆಂಥ್ರಪಾಲಜಿಯನ್ನು ಐಚ್ಛಿಕ ವಿಷಯವನ್ನು ಆಯ್ಕೆ ಮಾಡುತ್ತಾರೆ. ಈ ಬಾರಿ ಉತ್ತೀರ್ಣರಾಗುವ ಜೊತೆಗೆ 3ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ.
ಉಮಾ ಅವರು UPSC ಪರೀಕ್ಷೆ ಬರೆಯಲು ಆನ್ಲೈನ್ ಸಿವಿಲ್ ಸರ್ವೀಸೆಸ್ ಕೋಚಿಂಗ್ ಸಂಸ್ಥೆಯಲ್ಲಿ ತಮ್ಮ ಕರಿಯರ್ ಅನ್ನು ಪ್ರಾರಂಭಿಸುತ್ತಾರೆ. ಉಮಾ ತೆಲಂಗಾಣದ ಎಸ್ ಪಿ ಅವರ ಮಗಳಾದರೂ, ಮೂರ್ನಾಲ್ಕು ಬಾರಿ UPSC ಗೆ ಅರ್ಹತೆ ಪಡೆಯದೆ ಇದ್ದರೂ ಹಠದಿಂದ, ತಾಳ್ಮೆಯಿಂದ ಮತ್ತೆ ಪರೀಕ್ಷೆ ಬರೆಯುವುದಷ್ಟೇ ಅಲ್ಲದೇ ರ್ಯಾಂಕ್ ಕೂಡ ಪಡೆಯುತ್ತಾರೆ. ಇದರೊಂದಿಗೆ UPSC ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ತಾಳ್ಮೆ ಹಾಗೂ ಛಲ ಎಷ್ಟು ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.