ದಾವಣಗೆರೆ, ಜ 15 (DaijiworldNews/AA): ಬಿಜೆಪಿ ಪಕ್ಷಕ್ಕೆ ಒಂದು ಸಿದ್ಧಾಂತವಿದೆ. ಸಂಸದ ಅನಂತ್ ಕುಮಾರ್ ಹೆಗಡೆ ಆಗಲಿ ಅಥವಾ ಯಾರೇ ಆಗಲಿ ಆರೋಗ್ಯಕರವಾಗಿ ಟೀಕೆ, ಟಿಪ್ಪಣಿ ಮಾಡ್ಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಏಕವಚನ ಬಳಸಿರುವುದನ್ನು ನಾನು ಒಪ್ಪುವುದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರು ಸರ್ಜಿಕಲ್ ಸ್ಟ್ರೈಕ್ ವಿಚಾರವಾಗಿ ಮಾತನಾಡುವಾಗ ಏಕವಚನ ಬಳಸಿದ್ದರು. ಯಾರೇ ಆದರೂ ಸರಿ ಏಕವಚನದಲ್ಲಿ ಮಾತನಾಡಬಾರದು ಎಂದರು.
ಇನ್ನು ತನಗೆ ಜೀವ ಬೆದರಿಕೆ ಇದೆ ಎಂಬ ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದೇಶ್ವರ ಅವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನ ಬಿಡಬೇಕು. ಜೀವ ಬೆದರಿಕೆ ಇದ್ದರೆ ಪ್ರಧಾನಿ ಮೋದಿಗೆ ಪತ್ರ ಬರೆಯಲಿ. ಜೀವ ಬೆದರಿಕೆ ಇದ್ದಲ್ಲಿ ದೂರು ದಾಖಲಿಸಲಿ. ಹಾಗೆ ಆಗಿದ್ದರೆ ಅದನ್ನು ನಾನು ವಿರೋಧಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.