ಮುಂಬೈ, ಜ 15 (DaijiworldNews/HR): ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನಾ ಎಂದಿರುವ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ನಿರ್ಧಾರದ ವಿರುದ್ಧ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಸುಪ್ರೀಂ ಕೋರ್ಟ್ಗೆ ಮೆಟ್ಟಿಲೇರಿದೆ.
ಏಕನಾಥ್ ಶಿಂಧೆ ಸೇರಿದಂತೆ 16 ಶಿವಸೇನೆ ಶಾಸಕರ ಅನರ್ಹತೆಯ ವಿರುದ್ಧದ ಅರ್ಜಿಗಳನ್ನು ಜನವರಿ 10 ಬುಧವಾರ ವಜಾಗೊಳಿಸಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, ಪಕ್ಷದ 2018 ರ ಸಂವಿಧಾನವನ್ನು ಚುನಾವಣಾ ಆಯೋಗ ದಾಖಲೆಯಲ್ಲಿಲ್ಲದ ಕಾರಣ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಚುನಾವಣಾ ಆಯೋಗವು ಒದಗಿಸಿದ ಶಿವಸೇನಾ ಸಂವಿಧಾನವು ನಿಜವಾದ ಸಂವಿಧಾನವಾಗಿದೆ, ಇದನ್ನು ಎಸ್ಎಸ್ ಸಂವಿಧಾನ ಎಂದು ಕರೆಯಲಾಗುತ್ತದೆ ಎಂದು ಸ್ಪೀಕರ್ ಹೇಳಿದ್ದು ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನಾ ಎಂದಿದ್ದಾರೆ.