ನವದೆಹಲಿ, ಜ 15 (DaijiworldNews/AA): ಆನ್ ಲೈನ್ ಗೇಮಿಂಗ್ ಆ್ಯಪ್ ವೊಂದನ್ನು ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಪ್ರಚಾರ ಮಾಡುತ್ತಿರುವ ವಿಡಿಯೋವನ್ನು ಡೀಪ್ ಫೇಕ್ ಮಾಡಿ ಹರಿಬಿಡಲಾಗಿದ್ದು, ಈ ಬಗ್ಗೆ ಸಚಿನ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಚಿನ್ ಅವರು, 'ಈ ವಿಡಿಯೊ ನಕಲಿ. ಈ ರೀತಿ ತಂತ್ರಜ್ಞಾನವು ದುರ್ಬಳಕೆ ಆಗುವುದನ್ನು ಕಂಡಾಗ ಬೇಸರವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ರೀತಿಯ ವಿಡಿಯೋ, ಜಾಹೀರಾತು, ಅಪ್ಲಿಕೇಶನ್ ಗಳನ್ನು ರಿಪೋರ್ಟ್ ಮಾಡುವಂತೆ ಎಲ್ಲರಲ್ಲೂ ವಿನಂತಿ. ಸಾಮಾಜಿಕ ಮಾಧ್ಯಮ ವೇದಿಕೆಗಳು ಯಾವಾಗಲೂ ನಾವು ನೀಡುವ ದೂರುಗಳಿಗೆ ಎಚ್ಚರಿಕೆ ಹಾಗೂ ಸ್ಪಂದಿಸುವಂತ ಅಗತ್ಯವಿದೆ. ತಪ್ಪು ಮಾಹಿತಿ ಹಾಗೂ ಡೀಪ್ ಫೇಕ್ ಗಳ ಹರಡುವಿಕೆಯನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ.' ಎಂದು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್, ಆಲಿಯಾ ಭಟ್ ಹೀಗೆ ಹಲವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಸಚಿನ್ ತೆಂಡೂಲ್ಕರ್ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮತ್ತೆ ಡೀಫ್ ಫೇಕ್ ವಿಡಿಯೋ ವಿಚಾರ ಮುನ್ನಲೆಗೆ ಬಂದಿದೆ.