ಬೆಂಗಳೂರು, ಜ 15 (DaijiworldNews/AA): ಅನಂತ್ ಕುಮಾರ್ ಹೇಳಿಕೆಗೆ ಹಾಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಮಾತು ಸಮಾಜ ಒಪ್ಪುವಂತೆ ಇರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಅನಂತಕುಮಾರ್ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಮೊದಲೇ ರಾಜಕಾರಣಿಗಳನ್ನು ನಂಬುವುದಿಲ್ಲ. ಆ ರೀತಿಯ ಪರಿಸ್ಥಿತಿ ಇದೆ. ಯಾರೇ ಇದ್ದರೂ ನಮ್ಮ ಹೇಳಿಕೆ ಗಂಭೀರವಾಗಿರಬೇಕು. ನಮ್ಮ ಮಾತು ಸಮಾಜ ಒಪ್ಪುವಂತೆ ಇರಬೇಕು ಎಂದು ತಿಳಿಸಿದರು.
ಅನಂತ್ ಕುಮಾರ್ ಹೆಗ್ಡೆ ಅವರ ಹೇಳಿಕೆಯನ್ನು ನಾನೂ ಕೂಡ ಗಮನಿಸಿದ್ದೇನೆ. ಈ ಬಗ್ಗೆ ನಾನು ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ. ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಅವರು ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳು ಎಂದರು.
ರಾಮಮಂದಿರ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ವಿವಾದಾತ್ಮಕ ಹೇಳಿಕೆ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಆರೋಪ ಪ್ರತ್ಯಾರೋಪಗಳಿಗೆ ಪುಷ್ಠಿ ನೀಡಿದಂತಾಗಿದೆ.