ಬೆಂಗಳೂರು, ಎ22(Daijiworld News/SS): ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುಡುವ ಬಿರುಬಿಸಿಲಿನ ನಡುವೆಯೇ ಕರ್ನಾಟಕದಲ್ಲಿ 14 ಲೋಕಸಭಾ ಕ್ಷೇತ್ರಗಳು ಎರಡನೇ ಹಂತದ ಮತದಾನ ಹಬ್ಬದ ಕ್ಷಣಗಣನೆಗೆ ಸಜ್ಜಾಗಿದೆ. ರಾಜ್ಯದಲ್ಲಿ ಏ.23ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭೆ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.
ಮೊದಲ ಬಾರಿಗೆ ಮತದಾನದ ಹಕ್ಕು ಪಡೆದು, ಮತ ಚಲಾಯಿಸುತ್ತಿರುವವರು ಜವಾಬ್ದಾರಿಯುತ ಪ್ರಜೆಯಾಗಲು ಕಾತರದಿಂದ ಕಾಯುತ್ತಿದ್ದಾರೆ. 237 ಅಭ್ಯರ್ಥಿಗಳು ಕಣದಲ್ಲಿದ್ದು, ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
ಚುನಾವಣಾ ಆಯೋಗ 28,022 ಮತಗಟ್ಟೆಗಳನ್ನು ನಿರ್ಮಾಣ ಮಾಡಿದೆ. 2,43,03,279 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. 14 ಲೋಕಸಭಾ ಕ್ಷೇತ್ರಗಳ ಪೈಕಿ ಶಿವಮೊಗ್ಗ ಮತ್ತು ಕಲಬುರಗಿ ಕ್ಷೇತ್ರದ ಕಣ ತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಕಲಬುರುಗಿ, ವಿಜಯಪುರ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಏ.23ರಂದು ಮತದಾನ ನಡೆಯಲಿದೆ.
ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ರವಿವಾರ (ಏ21) ಸಂಜೆ 6 ಗಂಟೆಯವರೆಗೆ ಕಾಂಗ್ರೆಸ್- ಜೆಡಿಎಸ್, ಬಿಜೆಪಿಯ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿ ಮತದಾರನ ಮನವೊಲಿಕೆಯ ಅಂತಿಮ ಪ್ರಯತ್ನ ನಡೆಸಿದ್ದಾರೆ.
2ನೇ ಹಂತದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಷ್ಠೆ ಅಡಗಿದೆ. ಶಿವಮೊಗ್ಗದಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಯಡಿಯೂರಪ್ಪ ಗೆಲ್ಲಿಸಬೇಕಿದೆ.
ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಅವರು ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ್ ಅವರನ್ನು, ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ ಅವರನ್ನು ಬಹುಮತದಿಂದ ಗೆಲ್ಲಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪ್ರಚಾರ ಸಭೆ ನಡೆಸಿದ್ಧಾರೆ. ಸಿದ್ದರಾಮಯ್ಯ ಬೆಳಗಾವಿ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಯಚೂರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ, ಚಿಕ್ಕೋಡಿಯಲ್ಲಿ ಶೋಭಾ ಕರಂದ್ಲಾಜೆ, ಬೆಳಗಾವಿಯಲ್ಲಿ ಅರವಿಂದ ಲಿಂಬಾವಳಿ, ಬಾಗಲಕೋಟೆಯಲ್ಲಿ ಗೋವಿಂದ ಕಾರಜೋಳ, ವಿಜಯಪುರದಲ್ಲಿ ತೇಜಸ್ವಿ ಸೂರ್ಯ, ಬಳ್ಳಾರಿಯಲ್ಲಿ ಡಿ.ವಿ. ಸದಾನಂದ ಗೌಡ, ಶ್ರೀರಾಮುಲು ಹುಬ್ಬಳ್ಳಿಯಲ್ಲಿ, ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದಾರೆ.
2ನೇ ಹಂತದ ಲೋಕಸಭಾ ಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 28022 ಮತಗಟ್ಟೆಗಳಲ್ಲಿ 216 ಸಖಿ ಮತಗಟ್ಟೆ, 37 ವಿಶೇಷ ಚೇತನರು ನಿರ್ವಹಣೆ ಮಾಡುವ ಮತಗಟ್ಟೆಗಳಿವೆ.
1026 ಮತಗಟ್ಟೆಗಳಿಗೆ ಸಿಆರ್ಪಿಎಫ್ ಭದ್ರತೆ ಒದಗಿಸಲಾಗಿದೆ. 1479 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯವಿದೆ. 1952 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.