ಉತ್ತರ ಪ್ರದೇಶ, ಜ 14(DaijiworldNews/SK): ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಜ 22 ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯು ಆಗಲಿದೆ. ಈ ಕಾರ್ಯಕ್ರಮಕ್ಕೆ ಹಲವು ಮಂದಿ ಸಿನಿಮಾ ನಟರು, ಕ್ರಿಕೆಟಿಗರು ಸೇರಿದಂತೆ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದ್ದು, ಅದೇ ರೀತಿ ಸಮಾರಂಭಕ್ಕೆ ರಾಯಭಾರಿಗಳು, ಸಂಸದರು ಸೇರಿದಂತೆ 55 ರಾಷ್ಟ್ರಗಳ 100ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ವಿಶ್ವ ಹಿಂದೂ ಫೌಂಡೇಶನ್ ಸಂಸ್ಥಾಪಕ ಹಾಗೂ ಜಾಗತಿಕ ಮುಖ್ಯಸ್ಥ ಸ್ವಾಮಿ ವಿಜ್ಞಾನಾನಂದ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲಾರಸ್, ಬೋಟ್ಸ್ವಾನಾ, ಕೆನಡಾ, ಕೊಲಂಬಿಯಾ, ಡೆನ್ಮಾರ್ಕ್, ಡೊಮಿನಿಕಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಫಿಜಿ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಘಾನಾ, ಗಯಾನಾ, ಹಾಂಗ್ಕಾಂಗ್, ಹಂಗೇರಿ, ಇಂಡೋನೇಷ್ಯಾ, ಐರ್ಲೆಂಡ್, ಇಟಲಿ, ಜಮೈಕಾ, ಜಪಾನ್, ಕೀನ್ಯಾ, ಕೊರಿಯಾ, ಮಲೇಷ್ಯಾ, ಮಲಾವಿ, ಮಾರಿಷಸ್, ಮೆಕ್ಸಿಕೋ, ಮ್ಯಾನ್ಮಾರ್, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನೈಜೀರಿಯಾ, ನಾರ್ವೆ, ಸಿಯೆರಾ ಲಿಯೋನ್, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಸ್ಪೇನ್, ಶ್ರೀಲಂಕಾ, ಸುರಿನಾಮ್, ಸ್ವೀಡನ್, ತೈವಾನ್, ತಾಂಜಾನಿಯಾ, ಥೈಲ್ಯಾಂಡ್, ಟ್ರಿನಿಡಾಡ್ ಮತ್ತು ಟೊಬಾಗೊ, ವೆಸ್ಟ್ ಇಂಡೀಸ್, ಉಗಾಂಡಾ, ಯುಕೆ, ಯುಎಸ್ಎ, ವಿಯೆಟ್ನಾಂ ಮತ್ತು ಜಾಂಬಿಯಾ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣ ಕೂಡ ಕಳುಹಿಸಿಕೊಡಲಾಗಿದೆ ಎಂದರು.
ವಿವಿಐಪಿ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜನವರಿ 20 ರಂದು ಲಕ್ನೋಗೆ ಬಂದಿಳಿದು ಜನವರಿ 21 ರಂದು ಸಂಜೆಯ ಹೊತ್ತಿಗೆ ಅಯೋಧ್ಯೆಗೆ ಹೋಗುತ್ತಾರೆ. ಅಲ್ಲದೇ ಮಂಜು ಮತ್ತು ಹವಾಮಾನದ ವೈಪರಿತ್ಯದ ಕಾರಣ ಇತರೆ ದೇಶದ ಗಣ್ಯರನ್ನು ಪ್ರತಿಷ್ಠಾಪನೆಯ ಮೊದಲೆ ಭಾರತಕ್ಕೆ ಬರಲು ಸೂಚಿಸಲಾಗಿದೆ ಎಂದರು.
ಇನ್ನು ವಿದೇಶಿ ಪ್ರವಾಸಿಗರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸುವ ಯೋಜನೆ ಮಾಡಲಾಗಿತ್ತು. ಆದರೆ ಕಾರ್ಯಕ್ರಮ ನಡೆಯುವ ಸ್ಥಳ ಚಿಕ್ಕದಾಗಿರುವುದರಿಂದ ಅತಿಥಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.