ಬೆಂಗಳೂರು, ಜ 14(DaijiworldNews/SK): ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಿಸಿಸುತ್ತೇವೆ, ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ. ಆದರೆ ಇದೀಗ ರಾಜ್ಯದ ಮುಖ್ಯಮಂತ್ರಿಯ ಮೇಲೆನೇ ಅವಾಚ್ಯ ಶಬ್ಧಗಳನ್ನು ಬಳಸಿದ್ದೀರಾ "ನಿಮಗೆ ಸಂಸದರಲ್ಲ, ಯಾವುದೇ ಚುನಾಯಿತ ಪ್ರತಿನಿಧಿಯಾಗಿ ಭಾಗವಹಿಸುವ ಹಕ್ಕಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, "ಲೋಕಸಭಾ ಸದಸ್ಯರಾದ ಅನಂತ್ ಕುಮಾರ್ರವರೇ, "ಕುಲವಂ ಪೇಳ್ವುದು ನಾಲ್ಗೆ" ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದನ್ನು ನೀವಾಡಿರುವ ಮಾತು ತೋರಿಸಿಕೊಡುತ್ತದೆ. ಇದೇ ಏನು ನಿಮಗೆ ಬಿಜೆಪಿ, ಆರ್.ಎಸ್. ಎಸ್ ಹಾಗೂ ನಿಮ್ಮ ತಂದೆ-ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಷ್ಟು ದಿನಗಳ ವರೆಗೆ ನಿಮ್ಮ ಪತ್ತೆಯೇ ಇರಲಿಲ್ಲ. ಆದರೆ ಇದೀಗ ಲೋಕಾಸಭೆ ಚುನಾವಣೆ ಹತ್ತಿರ ಬರುವಾಗ ಮತಗಳಿಸುವ ಉದ್ದೇಶದಿಂದ ರೋಷ, ಆವೇಶದ ಮಾತುಗಳನ್ನು ಆಡುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಇರುವಷ್ಟು ದಡ್ದ ಜನರು ನಾವಲ್ಲ ಎಂದರು. ನೀವು ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದವನ್ನು 6.50 ಕೋಟಿ ಕರ್ನಾಟಕದ ಜನರು ಕೇಳಿಸಿಕೊಂಡಿರುತ್ತಾರೆ. ನೀವು ಆಡಿರುವ ಮಾತು, ಬಳಸಿರುವ ಪದ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತಿದೆ. ಇನ್ನು ನಿಮಗೆ ಜನರು ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಳಿಸಿ, ನಿಮ್ಮನ್ನು ಶಾಶ್ವತವಾಗಿ ಅಡ್ರೆಸ್ ಇಲ್ಲದಂತೆ ಮಾಡುತ್ತಾರೆ. ನೋಡ್ತಾ ಇರಿ" ಎಂದು ಎಚ್ಚರಿಕೆ ನೀಡಿದ್ದಾರೆ.