ಬೆಂಗಳೂರು,ಏ 22 (Daijiworld News/MSP): ರಾಜ್ಯದಲ್ಲಿ ನಡೆಯಲಿರುವ 2ನೇ ಹಂತದ ಚುನಾವಣೆಗೆ ಇನ್ನೊಂದೆ ದಿನ ಬಾಕಿ ಇರುವಂತೆ ಹಲವೆಡೆ ರಾಜಕಾರಣಿಗಳ ಆಪ್ತರ, ಚುನಾವಣಾ ಅಭ್ಯರ್ಥಿಗಳ ನಿಕಟವರ್ತಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ನಡೆಸಿದ್ದಾರೆ.
ರಾಯಚೂರಿನಲ್ಲಿನ ಲಿಂಗಸಗೂರು ರಸ್ತೆಯ ಕೃಷ್ಣ ಮೇಡ್ ಹೌಸ್ ಅಪಾರ್ಟ್ಮೆಂಟ್ನಲ್ಲಿರುವ ಜಿ.ಪಂ ಸದಸ್ಯ ಸಂದೀಪ್ ನಾಯಕ್ ಅವರ ಮನೆ ಮೇಲೆ ರೇಡ್ ಮಾಡಿ 2 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಇನ್ನು ಬೆಳಗಾವಿಯಲ್ಲೂ ದಾಳಿ ನಡೆದಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿಕಟವರ್ತಿ ವಿರಕಣಕೊಪ್ಪ ಗ್ರಾಮದಲ್ಲಿರುವ ತಾ.ಪಂ ಸದಸ್ಯ ಶಂಕರಗೌಡ ಪಾಟೀಲ್ ನಿವಾಸ ಹಾಗೂ ತೋಟದ ಮನೆ ಮೇಲೆ ದಾಳಿ ನಡೆಸಲಾಗಿದೆ.
ಇದಲ್ಲದೆ ಬೆಳಗಾವಿಯಲ್ಲಿ ಮತ್ತೊಂದೆಡೆ ದಾಳಿ ನಡೆದಿದ್ದು ಬಿಜೆಪಿ ಸಂಸದ ಹಾಗೂ ಅಭ್ಯರ್ಥಿ ಸುರೇಶ್ ಅಂಗಡಿ ಅಳಿಯ ಶಂಕರಗೌಡ ಪಾಟೀಲ್ ಅವರ ಕೆಕೆ.ಕೊಪ್ಪ ಗ್ರಾಮದಲ್ಲಿರುವ ನಿವಾಸದ ಮೇಲೂ ತಡರಾತ್ರಿ ಅಧಿಕಾರಿಗಳು ದಾಳಿ ನಡೆಸಿ ಮನೆಯಲ್ಲಿದ್ದ 30 ತೊಲೆ ಬಂಗಾರ, 2 ಲಕ್ಷ ರೂ. ನಗದು ಸೇರಿ ಆಸ್ತಿ ದಾಖಲೆಯನ್ನು ಗೋವಾ, ಬೆಳಗಾವಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿಯಲ್ಲಿ ಶಾಸಕ ಬಿ. ಶ್ರೀ ರಾಮುಲು ಆಪ್ತ ರಾಜು ಮನೆ ಹಾಗೂ ಕಾಂಗ್ರೆಸ್ ಶಾಸಕ ನಾಗೇಂದ್ರ ಸಂಬಂಧಿ ಯರಿಸ್ವಾಮಿ ಮನೆ ಮೇಲೆ ಐಟಿ ದಾಳಿ ನಡೆದಿದೆ. ಧಾರವಾಡದ ರೈಲ್ವೆ ನಿಲ್ದಾಣದ ಬಳಿಯ ಪವನ್ ಅಪಾರ್ಟ್ಮೆಂಟ್ ನಲ್ಲಿರುವ ಗಿರೀಶ್ ಕುಲಕರ್ಣಿ ಎಂಬುವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.