ರಾಯಚೂರು, ಎ22(Daijiworld News/SS): ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಕಾರ್ಯಾಚರಣೆ ಆರಂಭವಾಗಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಗಾಗಿ ಬೆಂಗಳೂರಿನಿಂದ ಆಗಮಿಸಿರುವ ಸಿಐಡಿ ತಂಡ ಕಾರ್ಯಾಚರಣೆ ಆರಂಭಿಸಿದೆ.
ಐಪಿಎಸ್ ಅಧಿಕಾರಿ ಶರಣಪ್ಪ ನೇತೃತ್ವದ ತಂಡದಲ್ಲಿ ಓರ್ವ ಡಿವೈಎಸ್ಪಿ, ಇಬ್ಬರು ಸಿಪಿಐ ಮತ್ತು ಎಂಟು ಸಿಬ್ಬಂದಿ ಇದ್ದಾರೆ. ಪ್ರಕರಣ ಸಂಬಂಧ ಅಧಿಕಾರಿಗಳು ನೇತಾಜಿ ನಗರ ಠಾಣೆಯ ಸಿಬ್ಬಂದಿಯನ್ನು ವಸತಿಗೃಹಕ್ಕೆ ಕರೆಸಿಕೊಂಡು ಮಾಹಿತಿ ಪಡೆದಿದ್ದಾರೆ. ನಂತರ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ದೊರೆತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನವೋದಯ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಮದು ಏ.3ರಂದು ಪರೀಕ್ಷೆ ಬರೆಯಲು ಹೋಗಿದ್ದವಳು ಹಿಂತಿರುಗಿರಲಿಲ್ಲ. ಏಪ್ರಿಲ್ 16ರಂದು ಮಧು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೊದಲಿಗೆ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು ಬಳಿಕ ಅತ್ಯಾಚಾರ ಹಾಗೂ ಕೊಲೆ ಎಂಬುದು ತಿಳಿದಿದೆ. ಘಟನೆಗೆ ಸಂಬಂಧಿಸಿ ಇದಾಗಲೇ ಸುದರ್ಶನ್ ಎಂಬಾತನನ್ನು ಬಂಧಿಸಲಾಗಿದೆ.
ಶರಣಪ್ಪ ರಾಯಚೂರಿಗೆ ಆಗಮಿಸಲಿದ್ದು, ಒಂದೆರಡು ದಿನ ನಗರದಲ್ಲಿ ಉಳಿದು ಪ್ರಕರಣದ ತನಿಖೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲಿ ಕೊಲೆ ಕುರಿತ ಮಾಹಿತಿ ಕಲೆಹಾಕುವ ಸಾಧ್ಯತೆಗಳಿದೆ.