ಬೆಂಗಳೂರು, ಜ 09 (DaijiworldNews/AA): ಭಾರತದ ಹಳ್ಳಿ, ಹಳ್ಳಿಗಳಲ್ಲಿ ಲಕ್ಷಾಂತರ ರಾಮದೇಗುಲ ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ ಎಂದು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ರಾಮದೇಗುಲಕ್ಕೆ ನೀಡಿದ ದೊಡ್ಡ ಕೊಡುಗೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಕುರಿತು ಕಾಂಗ್ರೆಸ್ ಮಾಡಿರುವ ಪೋಸ್ಟ್ ನಲ್ಲಿ "ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧಿನಾಯಕರಾಗಿದ್ದರು. ನಾಥುರಾಮ್ ಗೂಡ್ಸೆ ಹಾರಿಸಿದ ಗುಂಡಿಗೆ ಎದೆ ಸೀಳಿ ಹುತಾತ್ಮರಾದಾಗ ಮಹಾತ್ಮ ಗಾಂಧೀಜಿ ಅವರು ಹೇಳಿದ ಕೊನೇ ಮಾತು ಹೇ ರಾಮ್! ಆಗ ಬಿಜೆಪಿ ಪಕ್ಷ ಹುಟ್ಟೇ ಇರಲಿಲ್ಲ. ರಾಜೀವ್ ಗಾಂಧಿ ಅವರು 1985-86 ರಲ್ಲಿ ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬೀಗ ತೆಗೆಸಿ ರಾಮನ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು. ಅವರೇ 1989 ರಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ವಿಶ್ವ ಹಿಂದೂ ಪರಿಷತ್ ಗೆ ಅವಕಾಶ ಕಲ್ಪಿಸಿ ಕೊಟ್ಟವರು. ರಾಜೀವ್ ಗಾಂಧಿ ಅವರು ಮೊದಲ ಹೆಜ್ಜೆ ಇಡದಿದ್ದರೆ ಬಿಜೆಪಿಗೆ ಇದರ ಆಲೋಚನೆ ಸಹ ಬರುತ್ತಿರಲಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
"ದೂರದರ್ಶನದಲ್ಲಿ ರಾಮಾಯಣದ ಧಾರವಾಹಿ ಪ್ರಸಾರ ಮಾಡಿ ಮನೆ, ಮನೆಯೂ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ರಾಮ ಮತ್ತು ಆತನ ಆದರ್ಶಗಳನ್ನು ಕಾಂಗ್ರೆಸ್ ಮೊದಲಿಂದಲೂ ಪಾಲಿಸುತ್ತಾ ಬಂದಿದೆ. ಆದರೆ ರಾಮನ ಹೆಸರು ಹೇಳಿಕೊಂಡೇ ರಾಜಕೀಯ ಆಶ್ರಯ ಹುಡುಕುವ ರಾಜ್ಯ ಬಿಜೆಪಿಗೆ ಸನ್ಮತಿ ದೇ ಭಗವಾನ್ ಎಂದು ಹೇಳಬೇಕಾಗಿ ಬಂದಿರೋದು ದುರಂತ!" ಎಂದಿದೆ.
ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದು, ಅದು ನನ್ನ ವಯಕ್ತಿಕ ವಿಚಾರವಾಘಿದೆ. ಅಯೋಧ್ಯೆ ಪೂಜೆಯಲ್ಲಿ ಭಾಗಿಯಾಗುವ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಪ್ರತ್ಯೇಕ ದಿನ ಹೋಗಿ ಪೂಜೆ ಸಲ್ಲಿಸುವ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಿದರೆ ಅದಕ್ಕೂ ನಾವು ಸಿದ್ಧ. ನಾವು ಹಿಂದುಗಳಲ್ವಾ? ನಮ್ಮ ಪಕ್ಷದಲ್ಲಿಯೂ ಹಿಂದುಗಳಿಲ್ಲವೇ? ವಿಶೇಷ ಪೂಜೆ ಸಲ್ಲಿಸುತ್ತೇವೆ ಅದರಲ್ಲಿ ತಪ್ಪೇನಿದೆ? ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಇನ್ನು ನಾವೆಲ್ಲರೂ ಹಿಂದುಗಳು. ಇದು ಜ್ಯಾತ್ಯಾತೀತ ರಾಷ್ಟ್ರವಾಗಿದ್ದು, ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ನಮಗೆಲ್ಲರಿಗೂ ಒಮ್ಮತವಿದೆ. ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಹೇಳಿದ್ದಾರೆ.