ಬೆಂಗಳೂರು, ಜ 8(DaijiworldNews/AA): ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಭಾನುವಾರ ಭೇಟಿಯಾದರು.
ಜ. 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಬಳಿಕ ಸಂಪುಟ ವಿಸ್ತರಣೆ ಸಾಧ್ಯತೆ ಇದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರು ಬಿಜೆಪಿ ಸಂಪುಟದಲ್ಲಿ ಸ್ಥಾನ ಗಳಿಸುವ ವದಂತಿಗೆ ಈ ಭೇಟಿ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ನರೇಂದ್ರ ಸಿಂಗ್ ತೋಮರ್ ಅವರು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಕೃಷಿ ಮತ್ತು ರೈತ ಕಲ್ಯಾಣ ಖಾತೆಗೆ ರಾಜೀನಾಮೆ ನೀಡಿದ್ದರು. ಇದೀಗ ತೆರವಾಗಿರುವ ಈ ಖಾತೆಯನ್ನು ಎಚ್ ಡಿ ಕುಮಾರಸ್ವಾಮಿ ಅವರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಸ್ತುತ ಮುಂಡಾ ಅವರು ಹೆಚ್ಚುವರಿಯಾಗಿ ಇಲಾಖೆಯನ್ನು ನಿರ್ವಹಣೆ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಮೂಲಗಳ ಪ್ರಕಾರ ಕುಮಾರಸ್ವಾಮಿ ಕೆಂದ್ರ ಸಂಪುಟ ಸೇರ್ಪಡೆಯಾದರೆ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಅಂಗಪಕ್ಷ ಜೆಡಿಎಸ್ನ ನೈತಿಕತೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಉಭಯ ಪಕ್ಷಗಳು ಹೆಚ್ಚಿನ ಸ್ಥಾನ ಹೇಳುವಲ್ಲಿ ಸಹಕರಿಸುತ್ತದೆ.
ಮುಂಡಾ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ "ನನಗೆ ಕೇಂದ್ರ ಸಚಿವನಾಗುವ ಚಿಂತೆ ಇಲ್ಲ. ಕಾಂಗ್ರೆಸ್ ನ್ನು ಸೋಲಿಸಿ ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಕೇಂದ್ರ ಸಚಿವನಾಗಿ ಏನು ಮಾಡಬೇಕು? ನನಗೆ ತಿಳಿದಿಲ್ಲ. ಈ ವಿಷಯ ನನಗೆ ಮಾಧ್ಯಮದಿಂದ ಬಂದಿರುವುದು. ಕೇಂದ್ರ ಸಚಿವನಾಗಬೇಕೆಂಬ ಆಸೆ ನನಗಿಲ್ಲ. ಮುಂದಿನ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದರೇನು" ಎಂದರು.
ಮಾಜಿ ಪ್ರಧಾನ ಮಂತ್ರಿ ಎಚ್ ಡಿ ಡಿ ಭೇಟಿಯ ಬಗ್ಗೆ ಮಾತನಾಡಿದ ಸಚಿವ ಅರ್ಜುನ್ ಮುಂಡಾ ಅವರು, ಕಾಡುಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ ಟಿ) ಸ್ಥಾನಮಾನ ನೀಡುವಂತೆ ಎಚ್ ಡಿ ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಜೆಡಿಎಸ್ ವರಿಷ್ಠರು ಹಾಗೂ ಬುಡಕಟ್ಟು ಕಲ್ಯಾಣ ಸಚಿವಾಲಯದೊಂದಿಗೆ ಮಾತುಕತೆ ನಡೆಸುವಂತೆ ಪಿಎಂಒ ನೀಡಿದೆ ಎಂದು ತಿಳಿಸಿದ್ದಾರೆ.