ನವದೆಹಲಿ, ಜ 08 (DaijiworldNews/MS): ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಪಡೆದ ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ಐಎಎಸ್ ಸ್ವಾತಿ ಮೀನಾ ನಾಯ್ಕ್ ಗಮನ ಸೆಳೆಯುತ್ತಾರೆ.
ಸ್ವಾತಿ ಅವರು ಮಧ್ಯಪ್ರದೇಶ ಕೇಡರ್ನ ಐಎಎಸ್ ಅಧಿಕಾರಿ. ರಾಜಸ್ಥಾನದ ಶಿಕರ್ ಮೂಲದ ಇವರು 2007ರಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು ತನ್ನ 22ನೇ ವಯಸ್ಸಿನಲ್ಲಿ ಉತ್ತೀರ್ಣರಾಗಿ ಗಮನ ಸೆಳೆದಿದ್ದರು. ಇವರು ಮೊದಲ ಪ್ರಯತ್ನದಲ್ಲಿಯೇ 260ನೇ ರಾಂಕ್ ಪಡೆದಿದ್ದರು. ಆಕೆಯ ಬ್ಯಾಚ್ನಲ್ಲಿ ಅತ್ಯಂತ ಕಿರಿಯ ಅಧಿಕಾರಿ.
ಸ್ವಾತಿ ಸೋಫಿಯಾ ಬಾಲಕಿಯರ ಕಾಲೇಜಿನಲ್ಲಿ ಪದವಿ ಪಡೆದರು. ಆಕೆಯ ತಂದೆ ರಾಜಸ್ಥಾನದ ಸರ್ಕಾರಿ ಆಉದ್ಯೋಗಿಯಾಗಿದ್ದು, ಆಕೆಯ ತಾಯಿ ಪೆಟ್ರೋಲ್ ಪಂಪ್ ನಡೆಸುತ್ತಿದ್ದಾರೆ.
ಐಎಎಸ್ ಅಧಿಕಾರಿಯಾಗಲು ತನ್ನ ಚಿಕ್ಕಮ್ಮ ಒಬ್ಬರಿಂದ ಸ್ಫೂರ್ತಿ ಪಡೆದ ಸ್ವಾತಿ ತನ್ನ ತಾಯಿ ವೈದ್ಯಳಾಗಬೇಕೆಂದು ಬಯಸಿದ್ದರಿಂದ ಇಬ್ಬರ ಆಕಾಂಕ್ಷೆಗಳಲ್ಲಿ ವಿಭಿನ್ನತೆ ಇದ್ದರೂ , ಸ್ವಾತಿಯ ತಂದೆಯೂ ಆಕೆಗೆ ಹುರಿದುಂಬಿಸಿ ಕಾರಣ ಮೊದಲ ಪ್ರಯತ್ನದಲ್ಲಿಯೇ ಕಠಿಣ ಪರೀಕ್ಷೆಯನ್ನು ಭೇದಿಸಲು ಸಾಧ್ಯವಾಯಿತು.
ಈಕೆಯ ಸಹೋದರಿ ಐಎಫ್ಎಸ್ ಅಧಿಕಾರಿ. 2021ರ ಬ್ಯಾಚ್ನಲ್ಲಿ ಇಂಡಿಯನ್ ಫಾರಿನ್ ಸರ್ವೀಸ್ಗೆ ಆಯ್ಕೆಯಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಸಾಧನೆ ಮಾಡಿದ ಸ್ವಾತಿ ಈಗ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಠಿಣ ಪರಿಶ್ರಮ, ನಿಖರ ಗುರಿ ಇದ್ದರೆ ಯುಪಿಎಸ್ಸಿಯಲ್ಲಿ ಯಶಸ್ಸು ಪಡೆಯಬಹುದು ಎನ್ನುವುದನ್ನು ಇವರು ಸಾಧಿಸಿ ತೋರಿಸಿದ್ದಾರೆ.