ನವದೆಹಲಿ, ಜ 05 (DaijiworldNews/MS):ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಲ್ಲಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಾ ಪ್ರತಿಭಟನೆಯ ಸಮಯದಲ್ಲಿ ಅವರು ಜೊತೆಯಾಗಿ ಹೆಜ್ಜೆಹಾಕುತ್ತಿರುವ ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದಜೊತೆ ನಂಟುಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಎಎಪಿ ನಾಯಕ ಮನೀಶ್ ಸಿಸೋಡಿಯಾ ಇನ್ನೂ ಜೈಲಿನಲ್ಲಿದ್ದಾರೆ
"ಈ ಸ್ನೇಹವು ತುಂಬಾ ಹಳೆಯದು. ನಮ್ಮ ಪ್ರೀತಿ ಮತ್ತು ವಿಶ್ವಾಸವು ತುಂಬಾ ಪ್ರಬಲವಾಗಿದೆ" ಎಂದು ಶ್ರೀ ಕೇಜ್ರಿವಾಲ್ ಅವರು Xನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ, ಆಮ್ ಆದ್ಮಿ ಪಕ್ಷದ (ಎಎಪಿ) ಇಬ್ಬರೂ ನಾಯಕರು ಯುವಕರಾಗಿ ಕಾಣುತ್ತಿದ್ದಾರೆ.
"ಸಾರ್ವಜನಿಕರಿಗಾಗಿ ಕೆಲಸ ಮಾಡುವ ಈ ಉತ್ಸಾಹವು ತುಂಬಾ ಹಳೆಯದು. ಪಿತೂರಿಗಾರರು ಎಷ್ಟೇ ಪ್ರಯತ್ನಿಸಿದರೂ... ಈ ನಂಬಿಕೆ, ಈ ಪ್ರೀತಿ ಮತ್ತು ಈ ಸ್ನೇಹ ಎಂದಿಗೂ ಮುರಿಯುವುದಿಲ್ಲ" ಎಂದು ಮುಖ್ಯಮಂತ್ರಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
“ಬಿಜೆಪಿ ಕಳೆದ 11 ತಿಂಗಳಿಂದ ಸುಳ್ಳು ಕೇಸುಗಳನ್ನು ಹಾಕಿ ಮನೀಷ್ ನನ್ನು ಜೈಲಿನಲ್ಲಿಟ್ಟಿದೆ.ಆದರೆ ಅವರ ದಬ್ಬಾಳಿಕೆಯ ಮುಂದೆ ಮನೀಷ್ ಗಟ್ಟಿಯಾಗಿ ನಿಂತಿದ್ದಾರೆ, ಅವರ ಸರ್ವಾಧಿಕಾರಕ್ಕೆ ಇದುವರೆಗೂ ತಲೆ ಕೆಡಿಸಿಕೊಂಡಿಲ್ಲ, ಮುಂದೆಯೂ ತಲೆಬಾಗುವುದಿಲ್ಲ. ಈ ಸರ್ವಾಧಿಕಾರದ ಯುಗದಲ್ಲಿ , ಮನೀಶ್ ಅವರ ಧೈರ್ಯ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಹುಟ್ಟುಹಬ್ಬದ ಶುಭಾಶಯಗಳು ಮನೀಶ್," ಕೇಜ್ರಿವಾಲ್ ಬರೆದುಕೊಂಡಿದ್ದಾರೆ.