ಬೆಂಗಳೂರು, ಜ 05 (DaijiworldNews/MS): ಕರ್ನಾಟಕ ಸರ್ಕಾರವು 5 ಗ್ಯಾರಂಟಿಗಳಲ್ಲಿ ಒಂದಾದ ನಿರುದ್ಯೋಗಿ ಪದವೀಧರರ ಹಾಗೂ ಡಿಪ್ಲೊಮ ಪಾಸಾದವರಿಗಾಗಿ ಇರುವ "ಯುವನಿಧಿ ಯೋಜನೆ" ಚಾಲನೆ ಸಿಕ್ಕಿದ್ದು, ಅರ್ಜಿಸಲ್ಲಿಕೆ ಪ್ರಾರಂಭವಾಗಿ ಸುಮಾರು 10 ದಿನಗಳು ಕಳೆದಿವೆ. ಒಟ್ಟಾರೆ 10 ದಿನಗಳಲ್ಲಿ ಇಲ್ಲಿಯವರೆಗೆ ಒಟ್ಟು 32,184 ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಅಂದರೆ ಶೇ 6 ಪ್ರತಿಶತದಷ್ಟು ಅರ್ಹ ಫಲಾನುಭವಿಗಳು ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, ಬೆಳಗಾವಿ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಮೂರನೇ ಅತಿ ಹೆಚ್ಚು ಅರ್ಜಿ ಸಲ್ಲಿಕೆ ಬಾಗಲಕೋಟೆ 1,943, ನಂತರದ ಸ್ಥಾನದಲ್ಲಿ ವಿಜಯಪುರ 1,741 ಮತ್ತು ರಾಯಚೂರು 1,714 ಜಿಲ್ಲೆಗಳಿವೆ. ಉಡುಪಿ 236, ಕೊಡಗು 120, ಚಾಮರಾಜನಗರ 237 ಮತ್ತು ರಾಮನಗರ ಜಿಲ್ಲೆಯಲ್ಲಿ 329 ಅರ್ಜಿಗಳು ಸಲ್ಲಿಕೆಯಾಗಿವೆ.
ರಾಜ್ಯ ಸರ್ಕಾರವು ಸುಮಾರು 5 ಲಕ್ಷ ಅಭ್ಯರ್ಥಿಗಳು ಯುವನಿಧಿ ಪ್ರೋತ್ಸಾಹಧನದ ಸದುಪಯೋಗ ಪಡೆಯುತ್ತಾರೆ ಎಂದು ಮಾಹಿತಿ ನೀಡಿತ್ತು. ಯುವನಿಧಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಉದ್ಯೋಗ ಪಡೆಯುವವರೆಗೆ ಮಾತ್ರ ಅಥವಾ 2 ವರ್ಷ ಗರಿಷ್ಠ ಅವಧಿಯ ವರೆಗೆ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.