ಮಹಾರಾಷ್ಟ್ರ,ಏ21(Daijiworld News/AZM): ಮಲೇಗಾಂವ್ ಸ್ಫೋಟದ ಆರೋಪಿಯಾಗಿದ್ದ ಸಾಧ್ವಿ ಪ್ರಗ್ಯಾ ಠಾಕೂರ್ ಗೆ ಬಿಜೆಪಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದ್ದು, ಏನಾದ್ರೂ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರನ್ನು ಹತ್ಯೆ ಮಾಡಿದ್ದ ನಾಥುರಾಂ ಗೊಡ್ಸೆ ಬದುಕಿದ್ದಿದ್ದರೆ ಆತನಿಗೆ ಬಿಜೆಪಿ ಟಿಕೆಟ್ ನೀಡುತ್ತಿತ್ತು ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ.
ಈ ಕುರಿತು ಎಂಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸಚಿನ್ ಸಾವಂತ್ ಅವರು ಮಹಾರಾಷ್ಟ್ರದ ಕಲ್ಯಾಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದರು. ಸಾಧ್ವಿಗೆ ಟಿಕೆಟ್ ನೀಡುವ ಮೂಲಕ ಹಾಗೂ ಅದನ್ನು ಪ್ರಧಾನ ಮಂತ್ರಿ ಮೋದಿ ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದರು. ಖ್ಯಾತ ವಿಚಾರವಾದಿಗಳಾದ ಡಾ. ನರೇಂದ್ರ ದಾಬೋಲ್ಕರ್, ಎಂಎಂ ಕಲಬುರಗಿ, ಗೋವಿಂದ ಪನ್ಸಾರೆ ಮತ್ತು ಗೌರಿ ಲಂಕೇಶ್ರನ್ನು ಹತ್ಯೆ ಮಾಡಿದವರಿಗೂ ಬಿಜೆಪಿ ಟಿಕೆಟ್ ನೀಡುತ್ತಿತ್ತು ಎಂದು ಅವರು ಟೀಕಿಸಿದ್ದಾರೆ.
ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆ ಅವರಿಗೆ ನಾನು ಶಾಪ ಹಾಕಿದ್ದೆ. ನನ್ನ ಶಾಪದಿಂದ ಹಾಗೂ ಅವರ ಕರ್ಮದಿಂದ ಮೃತಪಟ್ಟಿದ್ದಾರೆ ಎಂದು ಸಾಧ್ವಿ ಪ್ರಗ್ಯಾ ಠಾಕೂರ್ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿನ್ ಸಾವಂತ್ ದೇಶಕ್ಕಾಗಿ ಮಡಿವರ ಕುರಿತು ಅವಹೇಳನವಾಗಿ ಮಾತನಾಡುತ್ತಾರೆ ಅಂತಹವರಿಗೆ ಮತ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೇಳುತ್ತಾರೆ ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.