ರಾಮನಗರ, ಜ 04 (DaijiworldNews/AA): ಭಾರತಕ್ಕೆ ಭದ್ರ ಬುನಾದಿ ಹಾಕಿರುವುದು ಕಾಂಗ್ರೆಸ್ ಪಕ್ಷ. ನೆಹರು ನಮಗೆ ಗಟ್ಟಿ ತಳಪಾಯ ನಿರ್ಮಿಸಿ ಕೊಟ್ಟಿದ್ದಾರೆ ಎಂದು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಭಾರತ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನದಂತೆ ದಿವಾಳಿಯಾಗುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶ ಬಲಿಷ್ಠವಾಗಿದ್ದು, ನೆಹರೂ ನಂತರ ಬಂದ ಪ್ರಧಾನಿಗಳು ಅವರವರ ಶಕ್ತಿಗೆ ಅನುಸಾರವಾಗಿ ಕೆಲಸ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ 5 ವರ್ಷ ಸಿಎಂ ಆಗಲು ಹೋರಾಟ ಮಾಡಬೇಕೆಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಯಾಕೆ ಈ ವಿಚಾರ ಚರ್ಚೆಗೆ ಬಂತು ಎಂದು ನೀವು ಅವರನ್ನೇ ಕೇಳಿ. ಅವರು ಆ ರೀತಿ ಹೇಳುವಂತ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಕರವೇ ಕಾರ್ಯಕರ್ತರ ಬಂಧನವನ್ನು ಖಂಡಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಬಿಜೆಪಿಗರಿಗೆ ಮಾಡಲು ಬೇರೆ ಕೆಲಸವಿಲ್ಲ. ಬಂಧಿತ ಶ್ರೀಕಾಂತ್ ಪೂಜಾರಿ ವಿರುದ್ಧ 16 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದ ಆದೇಶದ ಮೇರೆಗೆ ಶ್ರೀಕಾಂತ್ ನನ್ನು ಬಂಧಿಸಿದ್ದು, ಕಾನೂನಿನ ಅನುಸಾರ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ. ಬಿಜೆಪಿ ಆಡಳಿತದ ವೇಳೆ 20,000 ಜನರನ್ನು ರೌಡಿಶೀಟರ್ ನಿಂದ ಮುಕ್ತಗೊಳಿಸಲಾಗಿತ್ತು. ನಂತರ ಅವರನ್ನು ಪಕ್ಷದ ಶಾಲು ಹೊದಿಸಿ ಬಿಜೆಪಿಗೆ ಬರಮಾಡಿಕೊಂಡಿದ್ದರು. ಇದು ಬಿಜೆಪಿ ನೀಡಿದ ಆಡಳಿತವೆಂದು ವ್ಯಂಗ್ಯವಾಡಿದ್ದಾರೆ