ನವದೆಹಲಿ, ಜ 04 (DaijiworldNews/AA): ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಹಾಗೂ ವೈಎಸ್ ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್.ಶರ್ಮಿಳಾ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡ ಬಳಿಕ ಮಾತನಾಡಿದ ವೈ.ಎಸ್.ಶರ್ಮಿಳಾ ಅವರು, "ವೈಎಸ್ ಆರ್ ತೆಲಂಗಾಣ ಪಕ್ಷವನ್ನು ಇಂದು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಲು ಅತೀವ ಸಂತೋಷವಾಗುತ್ತಿದೆ. ವೈಎಸ್ ಆರ್ ತೆಲಂಗಾಣ ಪಕ್ಷವು ಕಾಂಗ್ರೆಸ್ ಪಕ್ಷದ ಭಾಗವಾಗುತ್ತಿರುವುದಕ್ಕೆ ನನಗೆ ಅಪಾರ ಹರ್ಷವುಂಟಾಗಿದೆ. ಕಾಂಗ್ರೆಸ್ ನಮ್ಮ ದೇಶದ ಅತಿದೊಡ್ಡ ಜಾತ್ಯಾತೀತ ಪಕ್ಷವಾಗಿದ್ದು, ಅದು ಎಂದಿಗೂ ಭಾರತದ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತದೆ. ಹಾಗೂ ಕಾಂಗ್ರೆಸ್ ನಮ್ಮ ದೇಶದ ಅಡಿಪಾಯವನ್ನು ನಿರ್ಮಿಸಿದೆ" ಎಂದರು.
ಬುಧವಾರ ರಾತ್ರಿಯೇ ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿದ್ದ ಶರ್ಮಿಳಾ ಇಂದು ಪಕ್ಷದ ಹಿರಿಯರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಇನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಶರ್ಮಿಳಾ ಅವರಿಗೆ ಪಕ್ಷದ ಶಾಲು ಹೊದಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತಿರರರು ಉಪಸ್ಥಿತರಿದ್ದರು.