ಬೆಂಗಳೂರು,ಏ21(Daijiworld News/AZM):ರಾಜ್ಯದಲ್ಲಿ ನಡೆಯುತ್ತಿರುವ ೨ನೇ ಹಂತದ ಲೋಕಸಭಾ ಚುನಾವಣೆ ಹಿನ್ನಲೆ ಹಣ ಸಾಗಾಟದ ಮೇಲೆ ಹದ್ದಿನ ಕಣ್ಣನ್ನಿರಿಸಿರುವ ಐಟಿ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ಒಟ್ಟು 4 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಶನಿವಾರ ಕರ್ನಾಟಕ, ಗೋವಾದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 4 ಕೋಟಿಗೂ ಅಧಿಕ ಮೊತ್ತದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಭದ್ರಾವತಿಗೆ ಹಣ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರನ್ನು ಪರಿಶೀಲನೆ ನಡೆಸಿದಾಗ ಕೋಟ್ಯಾಂತರ ರೂಪಾಯಿ ಹಣ ಪತ್ತೆಯಾಗಿದೆ. ಕಾರಿನ ಸ್ಟೆಪ್ನಿಯಲ್ಲಿ ೨ ಕೋಟಿ ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಸ್ಟೆಪ್ನಿಯಲ್ಲಿರುವ ಹಣವನ್ನು ತೆಗೆಯುವ ವಿಡಿಯೋವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಕಾರಿನ ಸ್ಟೆಪ್ನಿಯಲ್ಲಿ 2000 ರೂ.ಗಳ ನೋಟಿನ ಕಂತೆ-ಕಂತೆಯನ್ನು ತೆಗೆಯಲಾಗಿದೆ. ಈ ಟೈರ್ನಲ್ಲಿ 2.30 ಕೋಟಿ ಹಣವಿತ್ತು ಎಂದು ಐಟಿ ಇಲಾಖೆ ಹೇಳಿದೆ. ಭದ್ರಾವತಿಯನ್ನು ನಡೆಸಿದ ಮೊತ್ತೊಂದು ಕಾರ್ಯಾಚರಣೆಯಲ್ಲಿ 50 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಬಾಗಲಕೋಟೆಯ ನವನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 1 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಉದ್ಯೋಗಿ ತಮ್ಮ ಮನೆಯಲ್ಲಿ ಹಣವನ್ನು ಇಟ್ಟುಕೊಂಡಿದ್ದರು. ವಿಜಯಪುರದಲ್ಲಿ ನಡೆಸಿದ ದಾಳಿಯ ವೇಳೆ 10 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.