ಬೆಂಗಳೂರು, ಡಿ 03 (DaijiworldNews/AK): ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನವನ್ನು ಖಂಡಿಸಿ ಬಿಜೆಪಿ ಆರಂಭಿಸಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು, ಆ ವ್ಯಕ್ತಿ ಕರಸೇವಕರಲ್ಲ ಮತ್ತು ಆತನ ವಿರುದ್ಧ 16 ಪೊಲೀಸ್ ಪ್ರಕರಣಗಳಿವೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ಎಂಬ ವ್ಯಕ್ತಿಯನ್ನು ಪೊಲೀಸರು ದಾಖಲಿಸಿರುವ ಎಫ್ಐಆರ್ ಮತ್ತು ಇತರ ದಾಖಲೆಗಳಲ್ಲಿ ಕರಸೇವಕ ಎಂದು ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದಾರೆ.
ಆರೋಪಿ ಸ್ಥಾನದಲ್ಲಿರುವ ಆತನ ವಿರುದ್ಧ 16 ಪ್ರಕರಣಗಳಿವೆ. ಅವುಗಳಲ್ಲಿ ಕೆಲವು ಪ್ರಕರಣಗಳು ಹೊರ ಬಂದಿವೆ. ಕಾನೂನು ಪಾಲನೆ ಮಾಡದ ಹಾಗೂ 16 ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಬೆಂಬಲಿಸುತ್ತಿರುವ ಪಕ್ಷ ಬಿಜೆಪಿಯಾಗಿದೆ. ಬಿಜೆಪಿಗೆ ಏನಾಗಿದೆಯೋ ಗೊತ್ತಿಲ್ಲ' ಎಂದು ಹೇಳಿದರು.
'ಹಳೆಯ ಪ್ರಕರಣಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರಿಂದ ಅವುಗಳನ್ನು ಪರಿಶೀಲಿಸುವಾಗ ಪೂಜಾರಿ ಪ್ರಕರಣ ಬೆಳಕಿಗೆ ಬಂದಿತು ಎಂದು ಪರಮೇಶ್ವರ್ ತಿಳಿಸಿದರು.
ಬಿಜೆಪಿ ಮಾಜಿ ಸಚಿವ ವಿ ಸುನೀಲ್ ಕುಮಾರ್ ಅವರು ಕರಸೇವಕರ ಪಟ್ಟಿ ನೀಡುವುದಾಗಿ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಸಾಮರ್ಥ್ಯವಿದ್ದರೆ ಅವರನ್ನು ಬಂಧಿಸಲಿ ಎಂದು ಮಾಡಿದ ಸವಾಲಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, 'ಇಲ್ಲಿ ಯಾವುದೇ ವ್ಯಕ್ತಿಗಳಿಲ್ಲ. ಇದು ಜನರಿಂದ ಆಯ್ಕೆಯಾದ ಸರ್ಕಾರ. ಶಕ್ತಿ, ಸಾಮರ್ಥ್ಯ ಮತ್ತು ಅಧಿಕಾರವನ್ನು ಜನರು ನೀಡಿದ್ದಾರೆ. ಕಾನೂನು ಪ್ರಕಾರ ಸರ್ಕಾರ ಕಾರ್ಯನಿರ್ವಹಿಸುತ್ತದೆ' ಎಂದರು.
ಹುಬ್ಬಳ್ಳಿಯಲ್ಲಿ ಡಿ. 5, 1992 ರಂದು ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದಾರೆ. ಪೂಜಾರಿ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತರ ಎಂಟು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.