ಅಯೋಧ್ಯೆ, ಜ 03 (DaijiworldNews/AA): ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಈ ಹಿನ್ನೆಲೆ ಅಯೋಧ್ಯೆಯನ್ನು ಮದುಮಗಳಂತೆ ಸಿಂಗರಿಸಲಾಗುತ್ತಿದೆ. ಇದರ ನಡುವೆಯೇ ವಿಶ್ವದ ಅತಿ ಎತ್ತರದ ಭಗವಾನ್ ಶ್ರೀ ರಾಮನ ಪ್ರತಿಮೆ ಸ್ಥಾಪನೆಗೆ ಸಿದ್ಧತೆ ನಡೆಸಲಾಗುತ್ತಿದೆ.
823 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಸರಯೂ ನದಿ ದಡದಲ್ಲಿ ಸ್ಥಾಪನೆ ಮಾಡಲಾಗುತ್ತಿದ್ದು, ಈ ಪ್ರತಿಮೆಯು ಪ್ರಸ್ತುತ ಹರ್ಯಾಣದ ಮಾನೇಸರ್ ನಲ್ಲಿರುವ ಕಾರ್ಖಾನೆಯಲ್ಲಿ ತಯಾರಾಗುತ್ತಿದೆ. ಹರ್ಯಾಣದ ಖ್ಯಾತ ಶಿಲ್ಪಿ ನರೇಂದರ್ ಕುಮಾವತ್ ಅವರಿಗೆ ಪ್ರತಿಮೆ ರಚಿಸುವ ಹೊಣೆಯನ್ನು ವಹಿಸಲಾಗಿದೆ.
13,000 ಟನ್ ತೂಕದ ಶ್ರೀರಾಮನ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗುವುದ ಜೊತೆಗೆ ವಿಶ್ವ ದಾಖಲೆ ಸೇರುವ ಸಾಧ್ಯತೆ ಇದೆ. ಈ ಪ್ರತಿಮೆಯನ್ನು ಐದು ಪವಿತ್ರ ಲೋಹಗಳು ಅಥವಾ ಪಂಚ ಧಾತುಗಳ ಸಂಯೋಜನೆಯಿಂದ ರಚಿಸಲಾಗುತ್ತದೆ ಎನ್ನಲಾಗಿದೆ.
ಇನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಭಗವಾನ್ ಶ್ರೀರಾಮನ ಪ್ರತಿಮೆಯ ಮಾದರಿಗೆ ಈಗಾಗಲೇ ಅನುಮೋದನೆ ಸೂಚಿಸಿದ್ದಾರೆ. ಈ ಪ್ರತಿಮೆ ನಿರ್ಮಾಣಕ್ಕೆ ಸುಮಾರು 3,000 ಕೋಟಿ ರೂ. ಬಜೆಟ್ ನ ಅಗತ್ಯವಿದೆ. ಇನ್ನು 10-ಅಡಿ ಮೂಲಮಾದರಿಯ ವಿಗ್ರಹವನ್ನು ರಚಿಸಲಾಗುತ್ತದೆ.