ಉತ್ತರ ಪ್ರದೇಶ, ಜ 03 (DaijiworldNews/AA): ಓಮ್ಮೊಮ್ಮೆ ಕನಸಿನ ಉದ್ಯೋಗ ಹಾಗೂ ಆಯ್ಕೆ ಮಾಡಿಕೊಂಡ ವೃತ್ತಿ ವಿಭಿನ್ನವಾಗಿರುತ್ತದೆ. ಆದರೆ ಆ ಕೆಲಸದಲ್ಲಿ ಎಂದಿಗೂ ತೃಪ್ತಿ ಸಿಗುವುದಿಲ್ಲ. ಹೀಗಾಗಿ ಕೆಲವರೂ ಎಷ್ಟೇ ಕಷ್ಟವಾದರೂ ಸರಿ, ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೆ ತಕ್ಕ ಪರಿಶ್ರಮವನ್ನು ಹಾಕುತ್ತಾರೆ. ಇದೇ ರೀತಿ ಇದೆ ಹಿಮಾಂಶು ತ್ಯಾಗಿ ಅವರ ಕಥೆ. ಪೂರ್ಣಕಾಲಿಕ ಉದ್ಯೋಗದಲ್ಲಿದ್ದರೂ ತನ್ನ ಕನಸಿಗಾಗಿ ಯುಪಿಎಸ್ ಸಿ ಪರೀಕ್ಷೆ ಬರೆದು ಐಎಫ್ ಎಸ್ ಅಧಿಕಾರಿಯಾದ ಸ್ಪೂರ್ತಿದಾಯಕ ಸ್ಟೋರಿ ನಿಮಗಾಗಿ.
ಮೂಲತಃ ಉತ್ತರ ಪ್ರದೇಶದವರಾದ ಹಿಮಾಂಶು ತ್ಯಾಗಿ ಅವರು ಐಐಟಿ ರೂರ್ಕಿಯಲ್ಲಿ ವ್ಯಾಸಂಗ ಮಾಡಿದ್ದು, ರಾಸಾಯನಿಕ ಎಂಜಿನಿಯರಿಂಗ್ ನ ಪದವೀಧರರಾಗಿದ್ದಾರೆ. ಇವರು ಐಐಟಿ ರೂರ್ಕಿಯ ಮೆಡಲಿಸ್ಟ್ ಕೂಡ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಲ್ಲಿ ಎಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
ಕಾರ್ಪೊರೇಟ್ ವಲಯದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ಹಿಮಾಂಶು ಅವರಿಗೆ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಬೇಕೆಂಬ ಬಯಕೆ ಉಂಟಾಗುತ್ತದೆ. ಆದ್ದರಿಂದ ಯುಪಿಎಸ್ ಸಿ ಪರೀಕ್ಷೆ ಬರೆಯಲು ಮುಂದಾಗುತ್ತಾರೆ. ಬಳಿಕ 2020 ರಲ್ಲಿ ಎರಡನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆದ ಹಿಮಾಂಶು ತ್ಯಾಗಿ ಅವರು 25 ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ.
ಹಿಮಾಂಶು ಅವರು ಆಫೀಸ್ ಕೆಲಸಕ್ಕೆ ಓಡಾಡುವ ವೇಳೆ ಯುಪಿಎಸ್ ಸಿ ಪರೀಕ್ಷೆಗೆ ಓದುತ್ತಿದ್ದರು. ಈ ವೇಳೆ ಯುಪಿಎಸ್ ಸಿ ಗೆ ಸಂಬಂಧಿಸಿದ ತರಬೇತಿ ವಿಡಿಯೋಗಳನ್ನು ನೋಡುತ್ತಿದ್ದರು. ಜೊತೆಗೆ ತಮಗೆ ವಾರಾಂತ್ಯದಲ್ಲಿ ಸಿಗುತ್ತಿದ್ದ ಎರಡು ದಿನ ರಜೆಯನ್ನು ಸಹ ಸಂಪೂರ್ಣವಾಗಿ ಓದಲು ಮೀಸಲಿಡುತ್ತಿದ್ದರಂತೆ.
ಇನ್ನು ಪ್ರಿಲಿಮ್ಸ್ ಹಂತದಲ್ಲಿ ನಾನು ತೀವ್ರ ಏಕಾಗ್ರತೆಯ ಸಮಸ್ಯೆಯನ್ನು ಎದುರಿಸುತ್ತಿದ್ದೆ. ಈ ಹಂತದಲ್ಲಿ ಪರಿಣಾಮಕಾರಿ ತಂತ್ರಗಳನ್ನು ಬಳಸುವುದು ಅತ್ಯಗತ್ಯ. ಆಕಾಂಕ್ಷಿಗಳು ಓದಿಗೆ ಆದ್ಯತೆ ನೀಡುವುದು ಕಡ್ಡಾಯ. ನಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯವನ್ನು ತಿಳಿಯಲು ಬೇರೆ ಬೇರೆ ತಂತ್ರಗಳನ್ನು ಉಪಯೋಗಿಸುವ ಬದಲು ಹಲವಾರು ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಮುಖ್ಯ. ಈ ಮೂಲಕ ಆಕಾಂಕ್ಷಿಗಳು ವೈಯಕ್ತಿಯ ಅಭಿವೃದ್ಧಿಯನ್ನು ಕಾಣಬಹುದು ಎಂದು ಹಿಮಾಂಶು ಅವರು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುವ ಆಕಾಂಕ್ಷಿಗಳಿಗೆ ಕಿವಿಮಾತನ್ನ ಹೇಳಿದ್ದಾರೆ.
ಹಿಮಾಂಶು ತ್ಯಾಗಿ ಅವರು ಯುಪಿಎಸ್ಸಿ ಆಕಾಂಕ್ಷಿಗಳು ತಮ್ಮ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಈ ಕೆಳಗಿನ ಗೋಲ್ಡನ್ ಟಿಪ್ಸ್ ಗಳನ್ನು ಅನುಸರಿಸುವಂತೆ ತಿಳಿಸಿದ್ದಾರೆ.
1.ಬೆಳಗ್ಗೆ 3:30 ಕ್ಕೆ ಎಂದು ನಾಲ್ಕು ಗಂಟೆ ಅಧ್ಯಯನ ಮಾಡಬೇಕು.
2.ಸಂಜೆ ಆಫೀಸು ಮುಗಿದ ಬಳಿಕ ಅರ್ಧ ಗಂಟೆ ಅಧ್ಯಯನ ಮಾಡಬೇಕು.
3.ಅಧ್ಯಯನಕ್ಕೆ ಸಂಬಂಧಿಸಿದ ವಸ್ತುವನ್ನು ಯಾವಾಗಲು ಮೊಬೈಲ್ ಅಥವಾ ಸಿಸ್ಟಮ್ ನಲ್ಲಿರಲಿ. ಕೆಲಸದ ನಡುವೆ ಸಿಕ್ಕ ಬಿಡುವಿನ ಸಮಯದಲ್ಲಿ ಅಧ್ಯಯನ ಮಾಡಿ.
4.ವಾರಾಂತ್ಯದಲ್ಲಿ 10 ಗಂಟೆಗಳ ಕಾಲ ಅಧ್ಯಯನ ಮಾಡಿ.
ಈ ಗೋಲ್ಡನ್ ಟಿಪ್ಸ್ ಗಳನ್ನು ಪಾಲಿಸಿದರೆ ಒಂದೂವರೆ ವರ್ಷದಲ್ಲಿ ಯುಪಿಎಸ್ ಸಿ ಆಕಾಂಕ್ಷಿಗಳು ಆತ್ಮವಿಶ್ವಾಸ ಗಳಿಸಬಹುದು ಎಂದು ಹೇಳಿದ್ದಾರೆ.
ಕೆಲಸಕ್ಕೆ ತೆರಳುತ್ತ, ಸಿಕ್ಕ ಸಮಯವನ್ನು ಹಾಳು ಮಾಡದೆ ಸದುಪಯೋಗಪಡಿಸಿಕೊಂಡು ತನ್ನ ಗುರಿಯನ್ನು ಸಾಧಿಸಿದ ಹಿಮಾಂಶು ತ್ಯಾಗಿ ಎಲ್ಲಾ ಯುಪಿಎಸ್ ಸಿ ಆಕಾಂಕ್ಷಿಗಳಿಗೆ ಮಾದರಿಯಾಗಿದ್ದಾರೆ.