ಭೋಪಾಲ್,ಏ20(Daijiworld News/AZM): ವೀರಮರಣವನ್ನಪ್ಪಿದ ಮಹಾರಾಷ್ಟ್ರ ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ನೀಡಿದ ಹೇಳಿಕೆಗಾಗಿ ಮಾಲೆಗಾಂವ್ ಸ್ಫೋಟ ಆರೋಪಿ ಹಾಗೂ ಭೋಪಾಲ್ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಚುನಾವಣಾ ಆಯೋಗ ನೋಟೀಸು ಜಾರಿಮಾಡಿದೆ.
ಕರ್ಕರೆಗೆ ತನ್ನ ಶಾಪ ತಗುಲಿತ್ತೆಂದು ಪ್ರಗ್ಯಾ ಸಿಂಗ್ ಹೇಳಿಕೆ ನೀಡಿದ್ದು,ಈ ಹೇಳಿಕೆಯು ಸಾಕಷ್ಟು ವಿವಾದಕ್ಕೊಳಗಾಗಿ ಟೀಕಾಪ್ರಹಾರವೇ ಹರಿದು ಬಂದಿತ್ತು. ಬಳಿಕ ಪ್ರಗ್ಯಾ ತನ್ನ ಹೇಳಿಕೆಯನ್ನು ವಾಪಾಸ್ ತೆಗೆದುಕೊಂಡು ಕ್ಷಮೆ ಕೇಳಿದರು.
"ಪ್ರಕರಣವನ್ನು ಸ್ವಯಂಪ್ರೇರಣೆಯಿಂದ ಪರಿಗಣಿಸಿದ ಆಯೋಗ ಸಹಾಯಕ ಚುನಾವಣಾಧಿಕಾರಿಯಿಂದ ವರದಿ ಕೇಳಿದ್ದು, ಇಂದು ಬೆಳಗ್ಗೆ ವರದಿ ದೊರಕಿದೆ. ಅವರಿಗೆ ನೋಟಿಸ್ ಜಾರಿಗೊಳಿಸಲಾಗುವುದು'' ಎಂದು ಭೋಪಾಲ್ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸುದಮ್ ಖಡೆ ಹೇಳಿದ್ದರು. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಂಘಟಕರಿಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು.
ಪ್ರಗ್ಯಾ ಸಿಂಗ್ ಹೇಳಿಕೆ ವಿವಾದಕ್ಕೀಡಾಗಿದ್ದರೂ ಈ ವಿಚಾರದಿಂದ ದೂರ ಸರಿದು ನಿಂತ ಬಿಜೆಪಿ ಅದು ಆಕೆಯ ವೈಯಕ್ತಿಕ ಹೇಳಿಕೆಯಾಗಿದೆ. ಹಲವು ವರ್ಷಗಳಿಂದ ಅನುಭವಿಸಿದ ದೈಹಿಕ, ಮಾನಸಿಕ ಯಾತನೆಯಿಂದ ಆಕೆ ಹೀಗೆ ಹೇಳಿರಬಹುದು' 'ಎಂದಿತ್ತು.