ಬೆಂಗಳೂರು, ಡಿ 30 (DaijiworldNews/MR): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕಳೆದುಕೊಂಡಿದ್ದ ಪರ್ಸ್ ವಾಪಸ್ ಕೊಡಲು ಏರ್ಪೋರ್ಟ್ ಸಿಬ್ಬಂದಿ ಸತಾಯಿಸಿದ್ದಕ್ಕೆ ಹೀಗೆ ಮಾಡಿದೆ ಎಂದು ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಹುಸಿ ಬಾಂಬ್ ಕರೆ ಮಾಡಿದ್ದ ಯುವಕ ಕೋಲ್ಕತ್ತಾ ಮೂಲದ ಶ್ರೇಯಸ್ ಎಂದು ಗುರುತಿಸಲಾಗಿದೆ.
ಪ್ರಯಾಣ ಮಾಡುವ ವೇಳೆ ಸ್ಪೈಸ್ ಜೆಟ್ ವಿಮಾನದಲ್ಲಿ ತನ್ನ ಪರ್ಸ್ನ್ನ ಕಳೆದುಕೊಂಡಿದ್ದನು. ಬಳಿಕ ವಿಮಾನ ನಿಲ್ದಾಣದ ಅಧಿಕಾರಿಗಳನ್ನ ಸಂಪರ್ಕ ಮಾಡಿ ತನ್ನ ಪರ್ಸ್ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾನೆ.
ಪರ್ಸ್ ಇರುವುದು ಗೊತ್ತಾದ ಮೇಲೆ ವಾಪಸ್ ಪಡೆಯಲು ಬಂದಾಗ ಏರ್ಪೋರ್ಟ್ ಸಿಬ್ಬಂದಿ ಆತನನ್ನು ಸತಾಯಿಸಿದ್ದಾರೆ. ಹೀಗಾಗಿ ಕೋಪದಲ್ಲಿದ್ದ ಆರೋಪಿಯು ಸ್ಪೈಸ್ ಜೆಟ್ ಏರ್ಲೈನ್ಸ್ ಅಧಿಕಾರಿಗಳಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ.
ಸದ್ಯ ಕೆಂಪೇಗೌಡ ಏರ್ಪೋರ್ಟ್ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದು ಆತನನ್ನು ಬಿಟ್ಟು ಕಳುಹಿಸಿದ್ದಾರೆ.