ಅಮೇಠಿ,ಏ 20(Daijiworld News/MSP): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರ ತಿರಸ್ಕೃತವಾಗಲಿದೆಯೇ ಎನ್ನುವ ಅನುಮಾನವೊಂದು ಕಾಡತೊಡಗಿದ್ದು, ನಾಮಪತ್ರದಲ್ಲಿ ಹಲವು ಲೋಪಗಳಿದ್ದು, ರಾಹುಲ್ ಅವರು ನೀಡಿರುವ ದಾಖಲೆಗಳ ವಿರುದ್ದ ತಪ್ಪು ಮಾಹಿತಿಯ ಬಗ್ಗೆ ದೂರು ಬಂದಿರುವುದರಿಂದ ಪರಿಶೀಲನೆ ಕಾರ್ಯವನ್ನು ಏಪ್ರಿಲ್ 22ಕ್ಕೆ ಮುಂದೂಡುವಂತೆ ಅಮೇಠಿಯ ಚುನಾವಣಾಧಿಕಾರಿ ರಾಮ್ ಮನೋಹರ್ ಮಿಶ್ರಾ ಆದೇಶ ನೀಡಿದ್ದಾರೆ.
ಈ ಬಗ್ಗೆ ಸ್ವತಂತ್ರ ಅಭ್ಯರ್ಥಿ ಧ್ರುವ್ ಲಾಲ್ ಎಂಬವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಈ ದೂರಿನಲ್ಲಿ ಮೂರು ವಿಚಾರಗಳನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ರಾಹುಲ್ ನೀಡಿರುವ ಮಾಹಿತಿಯಂತೆ ಒಂದೆಡೆ ತಮ್ಮನ್ನು ಯುಕೆ ಪ್ರಜೆ ಎಂದು ಘೋಷಿಸಿಕೊಂಡಿದ್ದು, ಯುಕೆಯ ಕಂಪನಿಯೊಂದರ ಪ್ರಮಾಣಪತ್ರದಲ್ಲೂ ಇದೇ ಹೆಸರನ್ನು ಉಲ್ಲೇಖಿಸಿದ್ದಾರೆ.
ಆದರೆ ಪ್ರಜಾಪ್ರತಿನಿಧಿ ಕಾಯಿದೆ ಪ್ರಕಾರ ಭಾರತದಲ್ಲಿ ದೇಶದ ಪ್ರಜೆಗಳನ್ನು ಹೊರತುಪಡಿಸಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ. ಯುಕೆ ಪ್ರಜೆಯಾಗಿದ್ದವರು ಯಾವ ಆಧಾರದಲ್ಲಿ ಭಾರತದ ಪೌರತ್ವವನ್ನು ಪಡೆದುಕೊಂಡಿದ್ದಾರೆ ? ಮಾತ್ರವಲ್ಲದೆ ಅವರ ಯುಕೆ ಕಂಪನಿಯ ಆಸ್ತಿಪಾಸ್ತಿ ವಿವರಗಳು ನಾಮಪತ್ರದಲ್ಲಿ ಸಲ್ಲಿಸಿಲ್ಲವೇಕೆ? ಈ ವಿಚಾರಗಳಿಗೆ ಸ್ಪಷ್ಟತೆ ಬೇಕು ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ರಾಮ್ ಮನೋಹರ್ ಮಿಶ್ರಾ ನಾಮಪತ್ರ ಪರಿಶೀಲನೆ ಕಾರ್ಯವನ್ನು ಮುಂದೂಡಿದ್ದಾರೆ.