ನವದೆಹಲಿ, ಡಿ 30 (DaijiworldNews/MS): ಅಯೋಧ್ಯೆಯಲ್ಲಿ ಪೂರ್ಣಗೊಂಡಿರುವ ಭವ್ಯವಾದ ರಾಮಮಂದಿರದ ಉದ್ಘಾಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ರಾಜಕೀಯಹೇಳಿಕೆಗಳು ಮುಮ್ದುವರಿದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಅವರು ದೇವಾಲಯದ ಉದ್ಘಾಟನೆಗೆ ಅಭಿನಂದನೆ ಸಲ್ಲಿಸಿ ಭಗವಾನ್ ರಾಮ ಹಿಂದೂಗಳಿಗೆ ಮಾತ್ರವಲ್ಲ, ವಿಶ್ವದ ಎಲ್ಲರಿಗೂ ಸೇರಿದವನು ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ಜೊತೆ ವಿಶೇಷ ಸಂವಾದದಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, " ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಸೇರಿದ್ದಾನೆ. ಭಗವಾನ್ ರಾಮನು ಸಹೋದರತ್ವ, ಪ್ರೀತಿ ಮತ್ತು ಏಕತೆಯ ಬಗ್ಗೆ ಮಾತನಾಡಿದನು ಮತ್ತು ಜನರನ್ನು ಮೇಲಕ್ಕೆತ್ತಲು ಶ್ರೀರಾಮಚಂದ್ರ ಪ್ರಯತ್ನಿಸಿದ್ದಾರೆ ಮತ್ತು ಅವರ ಧರ್ಮದ ಬಗ್ಗೆ ಎಂದಿಗೂ ಕೇಳಲಿಲ್ಲ ಎಂದು ಹೇಳಿದ್ದಾರೆ.
ಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ. ಇಂದು ಈ ದೇವಾಲಯವು ಲೋಕಾರ್ಪಣೆ ಸಂದರ್ಭದಲ್ಲಿ , ನಮ್ಮ ದೇಶದಿಂದ ನಿಧಾನವಾಗಿ ಕಣ್ಮರೆಯಾಗುತ್ತಿರುವ ಸಹೋದರತ್ವವನ್ನು ಕಾಪಾಡಿಕೊಳ್ಳಲು ಕೆಲಸ ಮಾಡಿ ಎಂದು ಫಾರೂಕ್ ತಿಳಿಸಿದರು.