ಕಾಶ್ಮೀರ, ಎ20(Daijiworld News/SS): ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಕಾಶ್ಮೀರದ ನಡುವೆ ವ್ಯಾಪಾರ ಬಂದ್ ಮಾಡಲಾಗಿದೆ. ಎಲ್ಒಸಿ ಮೂಲಕ ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಮಾದಕ ದ್ರವ್ಯ ಸಾಗಣೆ ಹತ್ತಿಕ್ಕಲು ಭಾರತ ಈ ದಿಟ್ಟ ಕ್ರಮ ತೆಗೆದುಕೊಂಡಿದೆ. ಈ ಮೂಲಕ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ಮತ್ತು ಉಗ್ರಗಾಮಿಗಳಿಗೆ ಮತ್ತೊಂದು ಹೊಡೆತ ನೀಡಿದೆ.
ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಅಕ್ರಮ ವ್ಯವಹಾರಗಳನ್ನು ತಡೆಯುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣಾ ರೇಖೆಯುದ್ದಕ್ಕೂ ವ್ಯಾಪಾರ ವಹಿವಾಟನ್ನು ಭಾರತ ಸ್ಥಗಿತಗೊಳಿಸಿದೆ. ಈ ಸಂಬಂಧ ಗೃಹ ಸಚಿವಾಲಯವು ಆದೇಶ ಹೊರಡಿಸಿದೆ.
ಉಗ್ರ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಾಶ್ಮೀರದ ವ್ಯಕ್ತಿಗಳು ಎಲ್ಒಸಿ ವ್ಯಾಪಾರದಲ್ಲಿ ತೊಡಗಿರುವ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಇವರು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಚಟುವಟಿಕೆಗಳಿಗೆ ಹಣ ಒದಗಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾತ್ರವಲ್ಲ, ಪಾಕ್ ಮೂಲದ ಉಗ್ರ ಸಂಘಟನೆಗಳು ನಿಯಂತ್ರಣಾ ರೇಖೆಯ ವ್ಯಾಪಾರ ಮಾರ್ಗಗಳನ್ನು ದುರುಪಯೋಗಪಡಿಸಿ ಅಕ್ರಮವಾಗಿ ಶಸ್ತ್ರಾಸ್ತ್ರಗಳು, ಮಾದಕದ್ರವ್ಯ ಹಾಗೂ ನಕಲಿ ನೋಟುಗಳನ್ನು ಸಾಗಿಸುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ದಳದ ಪ್ರಕಾರ ಗಡಿ ಬಳಿ ವ್ಯಾಪಾರ ನಡೆಸುವ ಕೆಲವು ವ್ಯಕ್ತಿಗಳು, ಭಾರತದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತೆ ಉತ್ತೇಜಿಸುತ್ತಿರುವ ನಿಷೇಧಿತ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಜಮ್ಮು- ಕಾಶ್ಮೀರದ ಚಕ್ಕನ್ -ಡಾ ಬಾಗ್ ಮತ್ತು ಸಲಾಮಾಬಾದ್ ಬಳಿ ಎಲ್ಒಸಿ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ.