ಬೆಂಗಳೂರು, ಡಿ 28 (DaijiworldNews/AK): ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಸೂಚಿಸಿದೆ.
ತಮ್ಮ ವಿರುದ್ಧ ಎಫ್ಐಆರ್ ರದ್ದು ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸೂಚನೆ ನೀಡಿದೆ.
ಸರ್ಕಾರದ ಪರ ಎಸ್ಪಿಪಿಗೆ ನ್ಯಾಯಮೂರ್ತಿ ರಾಜೇಶ್ ರೈ ಅವರು ಸೂಚಿಸಿದ್ದಾರೆ. ಈ ಮೂಲಕ ಕಲ್ಲಡ್ಕ ಪ್ರಭಾಕರ್ ಭಟ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಇದನ್ನು ರದ್ದುಗೊಳಿಸುವಂತೆ ಸೂಚಿಸಬೇಕೆಂದು ಹೈಕೋರ್ಟ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಮೂರ್ತಿ ರಾಜೇಶ್ ರೈ, ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ.
ಪ್ರಭಾಕರ ಭಟ್ ಹೇಳಿದ್ದು ಏನು?
ಡಿಸೆಂಬರ್ 24ರಂದು ಶ್ರೀರಂಗಪಟ್ಟಣದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್, ವಿವಾದಾತ್ಮಕ ಹೇಳಿಕೆ ನೀಡಿದ್ದರು. ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡಂದಿರು. ಅವರಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದೇ ಮೋದಿ ಸರ್ಕಾರ’ ಎಂದು ಭಟ್ ಹೇಳಿದ್ದರು.
ಇನ್ನು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಝೀರ್ ಚಿಕ್ಕನೇರಳೆ ದೂರು ನೀಡಿದ್ದರು. ದೂರಿನ ಮೇರೆಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾಕರ್ ಭಟ್ ವಿರುದ್ಧ IPC ಸೆಕ್ಷನ್ 354, 294, 509, 506, 153A, 295 295A, 298ರ ಅಡಿ ಎಫ್ಐಆರ್ ದಾಖಲಾಗಿದೆ.